ಶ್ರೀಮಂಗಲ, ಮಾ. 29: ಟಿ.ಶೆಟ್ಟಿಗೇರಿ ತರಕಾರಿ ಮಾರುಕಟ್ಟೆ ಸಮೀಪ ಶುಕ್ರವಾರ ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಚಾಲಕ ದಿನೇಶ್ ಎಂಬಾತನ ಬಲಗೈ ತುಂಡಾಗಿದ್ದು ಬಲಗಾಲು ಪೂರ್ತಿ ಜಖಂಗೊಂಡಿರುವ ಘಟನೆ ಸಂಭವಿಸಿದೆ.ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕೆ ಕೆ ಆರ್ ನಿವಾಸಿ ತಮಿಳರ ಸೆಲ್ವಿ ಎಂಬಾಕೆಯ ಮಗ ದಿನೇಶ್ ಶುಕ್ರವಾರ ಬೆಳಿಗ್ಗೆ ತನ್ನ ಭಾವ ಮುತ್ತು ಎಂಬವರ ಕೆ.ಎ. 12ಕ್ಯೂ.0001 ನೋಂದಣಿ ಸಂಖ್ಯೆಯ ದ್ವಿಚಕ್ರ

(ಮೊದಲ ಪುಟದಿಂದ) ವಾಹನದಲ್ಲಿ ಶ್ರೀಮಂಗಲ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ತುಂಬಿಸಿ ಹಿಂತಿರುಗುತ್ತಿದ್ದ ಸಂದರ್ಭ ಅಂದಾಜು ಪೂರ್ವಾಹ್ನ 8.30 ಗಂಟೆಗೆ ಟಿ.ಶೆಟ್ಟಿಗೇರಿ ಪಟ್ಟಣ ಸಮೀಪ ತನ್ನ ಮುಂದಿದ್ದ ಮತ್ತೊಂದು ದ್ವಿಚಕ್ರ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದ ಸಂದರ್ಭ ಎದುರಿನಿಂದ ಬರುತ್ತಿದ್ದ ಬಿರುನಾಣಿಯ ರತ್ನ ಎಂಬವರ ಕೆ.ಎ. 12 ಎನ್. 798 ನೋಂದಣಿ ಸಂಖ್ಯೆಯ ಮಾರುತಿ 800 ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ದ್ವಿಚಕ್ರ ವಾಹನ ಸವಾರ ದಿನೇಶನ ಬಲಗೈ ತುಂಡಾಗಿದ್ದು, ಬಲಗಾಲು ಜಖಂಗೊಂಡಿದೆ. ಈ ಸಂದರ್ಭ ಅಪಘಾತವನ್ನು ನೋಡಿದ ಸ್ಥಳೀಯರು ಆಟೋ ರಿಕ್ಷಾದಲ್ಲಿ ಕೊಂಡೊಯ್ದು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಗೋಣಿಕೊಪ್ಪ ಆಸ್ಪತ್ರೆಯ ಆಂಬ್ಯುಲೆನ್ಸ್‍ನಲ್ಲಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಅಲ್ಲಿ ಚಿಕಿತ್ಸೆ ನೀಡುವ ಸಂದರ್ಭ ತುಂಡಾಗಿರುವ ಕೈಯನ್ನು ಮರುಜೋಡಣೆ ಮಾಡಲು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ಸಾರ್ವಜನಿಕರು ಸಲಹೆ ನೀಡಿದರೂ ಯುವಕ ದಿನೇಶನ ರಕ್ತದೊತ್ತಡ ಕ್ಷೀಣಿಸುತ್ತಿದ್ದು ಅಷ್ಟು ದೂರಕ್ಕೆ ತಲುಪಲು ಸಾಧ್ಯವಿಲ್ಲ. ತಕ್ಷಣ ಮೈಸೂರಿಗೆ ಕರೆದುಕೊಂಡು ಹೋಗಲು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ನೀಡಿದ ಸಲಹೆಯ ಮೇರೆಗೆ ಖಾಸಗಿ ಆಂಬ್ಯೂಲೆನ್ಸ್‍ನಲ್ಲಿ ಸಾಗಿಸಿ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಸಂದರ್ಭ ಮಾರುತಿ ಕಾರು ಚಲಾಯಿಸುತ್ತಿದ್ದ ರತ್ನ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

ಶ್ರೀಮಂಗಲ ಪೊಲೀಸ್ ಠಾಣಾ ಉಪನೀರಿಕ್ಷಕರು ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.