ಕುಶಾಲನಗರ, ಮಾ. 27: ಜೀವನದಿ ಕಾವೇರಿ ಹರಿಯುವ ಮೂಲದಿಂದಲೇ ನೀರಿನ ಗುಣಮಟ್ಟ ಸಿ ದರ್ಜೆಗೆ ಕುಸಿದಿರುವದು ಆತಂಕದ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ಹರಿಯುವ ನದಿ ನೀರಿನ ಗುಣಮಟ್ಟ ಮೂಲದಲ್ಲಿ ಎ ದರ್ಜೆಯಲ್ಲಿರ ಬೇಕಾಗಿದ್ದು ನದಿ ತಟಗಳಲ್ಲಿ ಉಂಟಾಗಿರುವ ಅವೈಜ್ಞಾನಿಕ ಬೆಳವಣಿಗೆಯಿಂದ ಹರಿಯುವ ನೀರಿನ ಗುಣಮಟ್ಟ ಕುಸಿಯಲು ಪ್ರಮುಖ ಕಾರಣವಾಗುತ್ತಿದೆ.

ದಕ್ಷಿಣ ಭಾರತದ 10 ಕೋಟಿಗೂ ಅಧಿಕ ಜನರಿಗೆ ಮತ್ತು ಜಾನುವಾರುಗಳಿಗೆ ನೀರುಣಿಸುವ ಕಾವೇರಿ ನದಿ ನೀರಿನ ಒಟ್ಟು ಶೇ. 35 ರಿಂದ 40 ಭಾಗ ನೀರಿನ ಪ್ರಮಾಣ ಕೊಡಗು ಜಿಲ್ಲೆಯ ಮೂಲಕ ಹರಿಯುತ್ತಿದೆ. ಕಾವೇರಿ, ಕನ್ನಿಕೆ, ಸುಜ್ಯೋತಿ ಸಂಗಮ ಮೂಲಕ ಹಾರಂಗಿ ಸೇರಿ ಜಿಲ್ಲೆಯಲ್ಲಿ ಹರಿದು ನಂತರ ಹೇಮಾವತಿ, ಲಕ್ಷ್ಮಣತೀರ್ಥ ಮತ್ತಿತರ ನದಿಗಳು ಕಾವೇರಿಯನ್ನು ಸೇರಿ ಸಮುದ್ರ ಸಂಗಮವಾಗುವ ತನಕ ಒಂದಲ್ಲ ಒಂದು ರೀತಿಯಲ್ಲಿ ತನ್ನ ಒಡಲಲ್ಲಿ ಕಲುಷಿತ ಹೊತ್ತು ಕೊಂಡು ಹೋಗುತ್ತಿರುವದು ಆತಂಕದ ಬೆಳವಣಿಗೆಯಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಫೆಬ್ರವರಿ ತಿಂಗಳ ವರದಿ ಪ್ರಕಾರ ಕರ್ನಾಟಕ ರಾಜ್ಯದ 19 ನದಿಗಳ ಪೈಕಿ 15 ನದಿಗಳು ಡಿ ದರ್ಜೆ ಗುಣಮಟ್ಟದಲ್ಲಿ ಹರಿಯುತ್ತಿದ್ದರೆ ಕಾವೇರಿ ನದಿ ನೀರಿನ ಗುಣಮಟ್ಟ ಸಿ ಮಟ್ಟಕ್ಕೆ ಇಳಿದಿದೆ. ಅಂದರೆ ನೀರನ್ನು ನೇರವಾಗಿ ಬಳಕೆ ಮಾಡಲು ಅಸಾಧ್ಯವಾಗಿರುವ ಪರಿಸ್ಥಿತಿ ಎದುರಾಗಿದೆ.

ನದಿ ತಟಗಳ ಒತ್ತುವರಿ, ಅವೈಜ್ಞಾನಿಕ ಪ್ರವಾಸಿ ಕೇಂದ್ರಗಳ ನಿರ್ಮಾಣ, ತಟಗಳಲ್ಲಿ ಅಪಾಯಕಾರಿ ಯಂತ್ರಗಳನ್ನು ಬಳಸುವ ಮೂಲಕ ನದಿಗೆ ನೇರವಾಗಿ ಕಲುಷಿತ ನೀರು ಬಿಡುಗಡೆ ಇದಕ್ಕಿಂತಲೂ ಅಪಾಯ ಕಾರಿ ಅಂದರೆ ಕಾಫಿ ಪಲ್ಪರ್ ತ್ಯಾಜ್ಯವನ್ನು ನೇರವಾಗಿ ನದಿಗೆ ಹರಿಸುತ್ತಿರುವದು. ಈ ಮೂಲಕ ನದಿ ನೀರಿನ ಗುಣಮಟ್ಟ ಸಂಪೂರ್ಣ ಕುಸಿಯುವದರೊಂದಿಗೆ ಜಲಚರಗಳ ಮಾರಣ ಹೋಮದೊಂದಿಗೆ ನೀರಿನ ಬಳಕೆಗೆ ಅಸಾಧ್ಯ ಎನಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಭಾಗಮಂಡಲದಿಂದ ಶಿರಂಗಾಲ ತನಕ 23 ಗ್ರಾ.ಪಂ. ಮತ್ತು ಕುಶಾಲ ನಗರ ಪ.ಪಂ. ಬಡಾವಣೆಗಳಿಂದ ಹೊರಸೂಸುವ ಮಾನವ ನಿರ್ಮಿತ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿವೆ. ಒಳಚರಂಡಿ ಯೋಜನೆಗಳು ಪೂರ್ಣ ಗೊಳ್ಳದೆ ನೆನೆಗುದಿಗೆ ಬಿದ್ದಿರುವದು ಅಪಾಯಕಾರಿ ಘಟಕಗಳಾದ ಶುಂಠಿ ತೊಳೆಯುವ ಯಂತ್ರಗಳು, ವಾಹನ ತೊಳೆಯುವ ಘಟಕಗಳಿಂದ ಮತ್ತು ಟೈಲ್ಸ್ ಗ್ರಾನೈಟ್ಸ್ ಘಟಕಗಳು ನದಿ ತಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಈ ಮೂಲಕ ಹೊರಸೂಸುವ ಅಪಾಯಕಾರಿ ತ್ಯಾಜ್ಯಗಳು ನದಿ ಪಾಲಾಗಿ ನದಿ ನೀರು ಬಹುತೇಕ ವಿಷ ಪೂರಿತವಾಗುತ್ತಿವೆ.

ಬೇಸಿಗೆ ಅವಧಿಯಲ್ಲಿ ನದಿಯ ನೀರು ಮನೆಗೆ, ಮನೆಯ ಕಲುಷಿತ ನೀರು ನೇರವಾಗಿ ನದಿಗೆ ಎನ್ನುವಂತೆ ಹರಿಯುತ್ತಿದೆ. ನದಿಯಲ್ಲಿ ಹರಿಯುವ ನೀರಿನ ಪ್ರಮಾಣಕ್ಕಿಂತ ಅಧಿಕ ಕಲುಷಿತ ನೀರು ನದಿ ಒಡಲು ಸೇರಿ ನೀರಿನ ಬಣ್ಣವೇ ಬದಲಾಗುವದರೊಂದಿಗೆ ವಾಸನಾಯುಕ್ತವಾಗಿ ಹರಿಯುತ್ತಿ ರುವದು ಸಾಮಾನ್ಯ ದೃಶ್ಯವಾಗಿದೆ.

ಕೊಡಗಿನ ನಾಪೋಕ್ಲು, ಕೂಟುಹೊಳೆ, ಕುಶಾಲನಗರದ ಬೈಚನಹಳ್ಳಿ ಗಡಿಭಾಗದ ಕೊಪ್ಪ ಸೇತುವೆ ಮತ್ತು ಕಣಿವೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ನೀರು ಗುಣಮಟ್ಟ ಪರಿಶೀಲನಾ ಕೇಂದ್ರದ ಅಧೀನದಲ್ಲಿ ಪ್ರತಿ ತಿಂಗಳು ನೀರಿನ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದ್ದು ನೀರಿನ ದರ್ಜೆಯ ಪರಿಶೀಲನೆ ಕೈಗೊಳ್ಳಲಾಗುತ್ತದೆ. ಕಾವೇರಿ ಮೂಲ ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಸಿ ದರ್ಜೆಗೆ ಇಳಿದಿದ್ದರೆ, ಹುಣಸೂರಿನ ಸಮೀಪ ಲಕ್ಷ್ಮಣತೀರ್ಥ ಕಾವೇರಿ ನದಿ ಸಂಗಮವಾಗುವ ಪ್ರದೇಶದಲ್ಲಿ ನೀರಿನ ಗುಣಮಟ್ಟ ಇ ದರ್ಜೆಗೆ ಇಳಿದಿರುವದು ಇನ್ನೂ ಆಘಾತಕಾರಿ ಬೆಳವಣಿಗೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಅನ್ವಯ ಎ ದರ್ಜೆ ಗುಣಮಟ್ಟದ ನೀರನ್ನು ನೇರವಾಗಿ ಬಳಕೆ ಮಾಡಬಹುದು. ಬಿ ಆದಲ್ಲಿ ಕುದಿಸಿ ಆರಿಸಿ ಕುಡಿಯಬೇಕಾಗುತ್ತದೆ. ಸಿ ದರ್ಜೆಯ ಗುಣಮಟ್ಟದ ನೀರನ್ನು ಬಳಕೆ ಮಾಡುವಂತಿಲ್ಲ. ಡಿ ದರ್ಜೆ ಅಂದರೆ ಪ್ರಾಣಿಗಳು ಬಳಸುವ ಗ್ರೇಡ್. ನಂತರ ಇ ದರ್ಜೆ ಅಂದರೆ ಕಾರ್ಖಾನೆಗಳಿಗೆ ಬಳಸುವ ಮಟ್ಟದಲ್ಲಿ ಇರುತ್ತದೆ.

ಕೊಡಗು ಜಿಲ್ಲೆಯಲ್ಲಿ ತಲಕಾವೇರಿ ಯಿಂದ ಹರಿದು ಜಿಲ್ಲೆಯ ಗಡಿಭಾಗ ಶಿರಂಗಾಲ ಮೂಲಕ ಹಾಸನ ಜಿಲ್ಲೆ ಕಡೆಗೆ ಪ್ರವೇಶಿಸುವ ಕಾವೇರಿ ನದಿ ದಂಡೆಯ ಭಾಗಮಂಡಲದಲ್ಲಿ ಸಮುದಾಯ ಶೌಚಾಲಯದ ಕೊರತೆ ಎದುರಾಗುವದರೊಂದಿಗೆ ಒಳಚರಂಡಿ ಯೋಜನೆ ಕಾಮಗಾರಿಗೆ ಸರಕಾರ ತಕ್ಷಣ ಯೋಜನೆ ರೂಪಿಸಬೇಕಾಗಿದೆ. ಇದೇ ರೀತಿಯ ನದಿ ಹರಿಯುವ ಹಾಲುಗುಂದ, ಕನ್ನಂಗಾಲ ವ್ಯಾಪ್ತಿಯಲ್ಲಿ 150 ಕ್ಕೂ ಅಧಿಕ ಮನೆಗಳು ನದಿ ತಟದಲ್ಲಿ ಕಾಣ ಬಹುದು. ಉಳಿದಂತೆ ಕಾಕೋಟು ಪರಂಬು, ಬೇತ್ರಿ ವ್ಯಾಪ್ತಿಯಲ್ಲಿ ಕೂಡ ನದಿ ತಟದಲ್ಲಿ 100 ಕ್ಕೂ ಅಧಿಕ ಮನೆಗಳು ನಿರ್ಮಾಣಗೊಂಡಿವೆ. ನಾಪೋಕ್ಲು ವ್ಯಾಪ್ತಿಯಲ್ಲಿ ನದಿ ತಟದಲ್ಲಿ ಅಂದಾಜು 1200 ಕ್ಕೂ ಅಧಿಕ ಮನೆಗಳು ಅಕ್ರಮವಾಗಿ ನಿರ್ಮಾಣ ಗೊಂಡಿವೆ. ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಕರಡಿಗೋಡು ಸೇರಿದಂತೆ ನೂರಾರು ಮನೆಗಳು ವಾರ್ಷಿಕ ಮಳೆಯಲ್ಲಿ ಮುಳುಗಿ ಸಂತ್ರಸ್ತರಾದರೂ ಮತ್ತೆ ಅದೇ ಸ್ಥಳದಲ್ಲಿ ನೆಲೆ ಕಾಣಲು ಸಹಕರಿಸುತ್ತಿರುವ ಕಾಣದ ಕೈಗಳು ಇಡೀ ನದಿ ಕಲುಷಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರೆ ತಪ್ಪಾಗಲಾರದು.

ನದಿ ಸಂರಕ್ಷಣೆಗಾಗಿ ಕಾನೂನು ರೂಪಿಸುವದು, ನದಿ ತಟಗಳ ಅಭಿವೃದ್ಧಿ ಮತ್ತಿತರ ಯೋಜನೆ ರೂಪಿಸಲು ರಾಜ್ಯದಲ್ಲಿ ನದಿ ರಕ್ಷಣಾ ಪ್ರಾಧಿಕಾರ ರಚಿಸುವದು, ನದಿ ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳ ಆದಾಯದ ಶೇ. 2 ರಷ್ಟು ಲಾಭಾಂಶದ ಅನುದಾನವನ್ನು ಬಳಸಿ ನದಿ ತಟಗಳನ್ನು ಅಭಿವೃದ್ಧಿಗೊಳಿಸಲು ಚಿಂತನೆ ಹರಿಸುವದು, ನೇರವಾಗಿ ನದಿ ಕಲುಷಿಕೆಗೆ ಕಾರಣರಾಗುವ ವಾಣಿಜ್ಯ ಘಟಕಗಳ ಪರವಾನಗಿ ರದ್ದು ಗೊಳಿಸಲು ಕ್ರಮ ಕೈಗೊಳ್ಳುವದು, ನದಿಗೆ ಶೌಚಾಲಯ ತ್ಯಾಜ್ಯ ಹರಿಸಲು ಕಾರಣರಾಗುವ ಕಟ್ಟಡಗಳ ಮಾಲೀಕರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವದು. ನದಿಗೆ ನೇರವಾಗಿ ವಾಹನಗಳು ಇಳಿಯದಂತೆ ಸ್ಥಳೀಯ ಆಡಳಿತ ಮೂಲಕ ರಕ್ಷಣಾ ಗೋಡೆ ನಿರ್ಮಿಸುವದು, ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಪ್ರವಾಸಿ ಕೇಂದ್ರಗಳ ತೆರವು ಬಗ್ಗೆ ಕಾರ್ಯ ಯೋಜನೆ ರೂಪಿಸುವದು ಈ ಮೂಲಕ ನದಿ ಸಂರಕ್ಷಣೆ ಸಾಧ್ಯ ಎನ್ನುವುದು ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರ ಆಗ್ರಹವಾಗಿದೆ. ನದಿ ಮತ್ತು ಜಲಮೂಲಗಳ ಸಂರಕ್ಷಣೆಗೆ ಎಲ್ಲಾ ರೀತಿಯ ಕಾರ್ಯ ಯೋಜನೆ ರೂಪಿಸಲಾಗುವದು ಎನ್ನುತ್ತಾರೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದು ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮೂಲಕ ಹರಿಯುವ ನದಿ ತಟದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಭೆ ಕರೆದು ನದಿ ಸಂರಕ್ಷಣೆಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗುವದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ನದಿ ಪರಿಸರ ಸಂರಕ್ಷಣೆಗೆ ಬಗ್ಗೆ ಲೋಕ ಅದಾಲತ್‍ಗೆ ಅಫಿದವಿಟ್ ಸಲ್ಲಿಸುವ ನಿಯಮವಿದ್ದರೂ ಪ್ರತಿ ವರ್ಷ ತಪ್ಪು ಮಾಹಿತಿ ರವಾನಿಸುತ್ತಿರುವದು ರೂಢಿಯಾಗಿದೆ. ಲೋಕಅದಾಲತ್ ಸಭೆಯಲ್ಲಿ ನದಿ ಸಂರಕ್ಷಣೆ ಬಗ್ಗೆ ಕಟ್ಟುನಿಟ್ಟಿನ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲು ಕಟ್ಟಾಜ್ಞೆಯಿದ್ದರೂ ಕಾವೇರಿ ನದಿ ಬಗ್ಗೆ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದರೆ ತಪ್ಪಾಗಲಾರದು.

ರೂ. 120 ಕೋಟಿಗೂ ಅಧಿಕ ವೆಚ್ಚದಲ್ಲಿ ಸರಕಾರ ಒಳಚರಂಡಿ ಯೋಜನೆ ನಿರ್ಮಿಸಲು ಮಡಿಕೇರಿ ಮತ್ತು ಕುಶಾಲನಗರದಲ್ಲಿ ಯೋಜನೆ ರೂಪಿಸಿದರೂ ಈ ಯೋಜನೆ ಪೂರ್ಣಗೊಳ್ಳದೆ ನಿರರ್ಥಕವಾಗಿದ್ದು ಜನರ ತೆರಿಗೆ ರೂಪದ ಕೋಟಗಟ್ಟಲೆ ಹಣ ನೀರು ಪಾಲಾಗಿದೆ.

ಕೂಡಲೇ ಜಿಲ್ಲಾಡಳಿತ ಹಾಗೂ ಜನಪ್ರತಿ ನಿಧಿಗಳು ಈ ನಿಟ್ಟಿನಲ್ಲಿ ಎಚ್ಚರ ವಹಿಸಿ ಜೀವನದಿ ಕಾವೇರಿಯನ್ನು ಕಾಪಾಡುವಲ್ಲಿ ಕಾರ್ಯಯೋಜನೆ ರೂಪಿಸಬೇಕಾಗಿದೆ.

- ಚಂದ್ರಮೋಹನ್