ಬೈಕ್ ಚಾಲನೆಯನ್ನು ಕೇವಲ ಶೋಕಿ ಎಂದು ತಿಳಿದುಕೊಳ್ಳದೇ ಬೈಕ್‍ನ ಗುಣಮಟ್ಟ ಹಾಗೂ ಸದೃಢತೆಯನ್ನು ತಿಳಿದು ಯುವಕರು ಅದನ್ನು ಖರೀದಿಸುವ ಮನಸ್ಸನ್ನು ಮಾಡಬೇಕೆಂದು ಮಡಿಕೇರಿ ನಗರಸಭಾ ಸದಸ್ಯ ಪಿ.ಡಿ. ಪೊನ್ನಪ್ಪ ಬೈಕ್ ಸವಾರರಿಗೆ ಕಿವಿಮಾತು ಹೇಳಿದರು. ಕುಶಾಲನಗರದ ಅಭ್ಯುದಯ ಮೋಟರ್ ಸರ್ವಿಸ್ ವತಿಯಿಂದ ರಾಯಲ್ ಎನ್ಫೀಲ್ಡ್ ಕಂಪೆನಿಯ ಸಹಯೋಗದೊಂದಿಗೆ ಬೈಕ್ ಸವಾರರಿಗೆ ಆಯೋಜಿಸ ಲಾಗಿದ್ದ ‘ರೈಡ್ ಫ್ರೀ ರೈಡ್ ಸೇಫ್ ಹಿಮಾಲಯನ್’ ಎಂಬ ಬೈಕ್ ರೇಸಿಂಗ್‍ಗೆ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದ ಅವರು, ರಾಯಲ್ ಎನ್ಫೀಲ್ಡ್ ಅವರ ಅತ್ಯಾಧುನಿಕ ಮೋಟಾರ್ ಬೈಕ್ ಆದ ಹಿಮಾಲಯನ್ ಬೈಕ್ ದ್ವಿಚಕ್ರ ವಾಹನ ಸವಾರರಿಗೆ ಅತ್ಯುತ್ತಮವಾದ ಅನುಭವವನ್ನು ನೀಡುತ್ತಿದ್ದು, ಅದನ್ನು ಚಾಲಿಸುವ ಚಾಲಕರಿಗೆ ಮಾತ್ರ ಅದರ ಅನುಭವವಾಗುತ್ತದೆ. ಇತ್ತೀಚಿಗೆ ರಾಯಲ್ ಎನ್ಫೀಲ್ಡ್ ಅನ್ನು ಬಹಳವಾಗಿ ಇಷ್ಟಪಡುವ ಯುವ ಸಮೂಹವೂ ಕೂಡ ಈ ಹಿಮಾಲ ಯನ್ ಮಾಡೆಲ್‍ಗೆ ಮೊರೆ ಹೋಗಿದ್ದು ಅತ್ಯಧಿಕ ಮುದ ನೀಡುವ ಹಾಗೂ ಆಕರ್ಷಣೆಯನ್ನು ಹೊಂದಿರುವದು ಕೂಡ ಅಲ್ಲದೆ ಗುಡ್ಡಗಾಡು ಪ್ರದೇಶ ಹಾಗೂ ಬೆಟ್ಟ-ಗುಡ್ಡ ಪ್ರದೇಶದಲ್ಲಿಯೂ ಕೂಡ ಡಾಂಬರ್ ರಸ್ತೆಯಲ್ಲಿ ಸಾಗುವ ಹಾಗೆಯೇ ಹಿಮಾಲಯನ್ ಬೈಕ್ ತನ್ನ ದೃಢತೆಯನ್ನು ತೋರಿಸುತ್ತಿದ್ದು ರಾಯಲ್ ಎನ್ಫೀಲ್ಡ್ ವತಿಯಿಂದ ಈ ರೀತಿಯ ಇನ್ನೂ ಅನೇಕ ಬೈಕ್ ರೈಡಿಂಗ್ ಶೋಗಳನ್ನು ಏರ್ಪಡಿಸಿ ಯುವ ಸಮೂಹದ ಆಕರ್ಷಣೆಗೆ ರಾಯಲ್ ಎನ್ಫೀಲ್ಡ್ ಮುಂದಾಗಲಿ ಎಂದು ಇದೇ ಸಂದರ್ಭ ತಿಳಿಸಿದರು.

ನಂತರ ಮಾತನಾಡಿದ ರಾಯಲ್ ಎನ್ ಫೀಲ್ಡ್‍ನ ಬ್ರಾಂಚ್ ಮ್ಯಾನೇಜರ್ ಆರೋನ್ ರಾಯಲ್ ಎನ್ಫೀಲ್ಡ್ ಕಂಪೆನಿಯು ಇತ್ತೀಚೆಗೆ ಹೊಸ ಹೊಸ ಬೈಕ್‍ಗಳ ವಿನ್ಯಾಸಗಳನ್ನು ತಯಾರಿ ಮಾಡುತ್ತಿದ್ದು, ಅವುಗಳಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಕೂಡ ಒಂದಾಗಿದೆ. ಇದು ಇತ್ತೀಚಿನ ಯುವ ಸಮೂಹವನ್ನು ಆಕರ್ಷಿಸುತ್ತಿದ್ದು, ಇದರ ಚಾಲನೆಯು ಯುವಕರಿಗೆ ಅತ್ಯಂತ ಉಲ್ಲಾಸವನ್ನು ನೀಡುತ್ತಿದ್ದು ಇಂತಹ ಬೈಕ್ ರೈಡಿಂಗ್ ಶೋಗಳನ್ನು ಇನ್ನು ಮುಂದೆಯೂ ಏರ್ಪಡಿಸಿ ಯುವ ಸಮೂಹವನ್ನು ಸೆಳೆಯುವದಾಗಿ ಆ ನಿಟ್ಟಿನಲ್ಲಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಕೂಡ ಹೊಸ ಮುನ್ನುಡಿ ಬರೆಯಲಿದೆ ಎಂದು ಇದೇ ಸಂದರ್ಭ ತಿಳಿಸಿದರು. ಈ ಸಂದರ್ಭ ಸುಮಾರು 50ಕ್ಕೂ ಅಧಿಕ ಬೈಕ್ ಸವಾರರು ಈ ಬೈಕ್ ರೈಡಿಂಗ್ ಶೋನಲ್ಲಿ ಪಾಲ್ಗೊಂಡಿದ್ದರು. ಶೋನಲ್ಲಿ ರಾಯಲ್ ಎನ್ಫೀಲ್ಡ್ ಸಿಬ್ಬಂದಿಗಳಾದ ತೇಜಸ್ ಪೂಣಚ್ಚ, ಉತ್ತಪ್ಪ, ದಿವ್ಯ, ಉಮೇಶ್, ಪ್ರಜೀತ್, ಅಜಯ್, ಉದಯ್, ಚೇತನ್, ಪ್ರಿಯಾ ಸೇರಿದಂತೆ ಇನ್ನಿತರರು ಹಾಜರಿದ್ದರು.

- ಪುತ್ತರಿರ ಕರುಣ್ ಕಾಳಯ್ಯ