ಮಡಿಕೇರಿ, ಮಾ. 27: ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ತಾ. 25 ರಂದು ವಿವಿಧ ಕಡೆ ದಾಳಿ ನಡೆಸಿದ್ದು, 2 ಗಂಭೀರ ಪ್ರಕರಣ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ (ಕಲಂ 15ಎ) 9 ಪ್ರಕರಣಗಳು ಹಾಗೂ ಸನ್ನದುಗಳ ಮೇಲೆ 4 ಸಾಮಾನ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ 27.140 ಲೀಟರ್ ಮದ್ಯ, 14.300 ಲೀಟರ್ ಬಿಯರ್, 1.5 ಲೀಟರ್ ಕಳ್ಳಭಟ್ಟಿ, 35 ಲೀಟರ್ ಪುಳಗಂಜಿ ವಶಪಡಿಸಿಕೊಳ್ಳಲಾಗಿದೆ.
ಮುಖ್ಯ ಚುನಾವಣಾಧಿಕಾರಿ ಅವರ ಆನ್‍ಲೈನ್ ದೂರಿನ ಸಂಬಂಧ, ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೈಸ್ ಅವರ ನೇತೃತ್ವದಲ್ಲಿ ಮಡಿಕೇರಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ನಿರೀಕ್ಷಕರು ರಾತ್ರಿ ಸುಮಾರು 9 ಗಂಟೆಗೆ ಮಡಿಕೇರಿಯಿಂದ ಹೊರಟು 50 ಕಿ.ಮಿ. ದೂರವಿರುವ ಅರಣ್ಯ ಪ್ರದೇಶ ಹೊಂದಿರುವ ಚೆಂಬು-ದಬ್ಬಡ್ಕ ಗ್ರಾಮದ ಡಿ.ಬಿ. ಗೋಪಾಲ, ಬಿನ್ ಬೊಳ್ಳಪ್ಪ ಅವರ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ಮತ್ತು ಮನೆಯ ಹಿಂಭಾಗದಲ್ಲಿ 5 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು 40 ಲೀಟರ್ ಗೇರು ಹಣ್ಣಿನ ಹುಳಿ ರಸ, 10 ಕೆ.ಜಿ. ಬೆಲ್ಲ ಮತ್ತು ಐಡಿ ಡಿಸ್ಟಿಲೇಷನ್ ಸೆಟ್ ಅನ್ನು ವಶಪಡಿಸಿಕೊಂಡು ಪ್ರ.ವ.ವ.ಸಂ:37/2018-19 ರಂತೆ ಗಂಭೀರ ಮೊಕದ್ದಮೆಯನ್ನು ಮಡಿಕೇರಿ ವಲಯ ಅಬಕಾರಿ ಉಪ ನಿರೀಕ್ಷಕರು ದಾಖಲಿಸಿ, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.