ಬಿಸಿಲ ಬೇಗೆಗೆ ತಂಪು ಪಾನೀಯ ಸರಬರಾಜು
ಕುಶಾಲನಗರ, ಮಾ. 26: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದು ಸಂಚಾರಿ ವಾಹನಗಳ ನಿರ್ವಹಣೆ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳ ಪಾಡು ಹೇಳತೀರದು. ಪಟ್ಟಣದ ಹೃದಯ ಭಾಗದ ಟ್ರಾಫಿಕ್ ಸಿಗ್ನಲ್ ಸೇರಿದಂತೆ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸುಮಾರು 20 ಮಂದಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಬಿಸಿಲಿನ ಝಳ ಹಾಗೂ ವಾಹನಗಳ ದಟ್ಟ ಹೊಗೆ ನಡುವೆ ಕರ್ತವ್ಯ ನಿರ್ವಹಿಸುವ ಒತ್ತಡದಲ್ಲಿ ಸಿಲುಕುತ್ತಿದ್ದಾರೆ. ಇದನ್ನು ಮನಗಂಡ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಸಮಸ್ಯೆಯತÀ್ತ ಗಮನಹರಿಸಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ತಂಪು ಪಾನೀಯ ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.
ಇತ್ತೀಚೆಗೆ ಕುಶಾಲನಗರಕ್ಕೆ ನಿಯೋಜನೆಗೊಂಡಿರುವ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳು ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ತಂಪು ಪಾನೀಯ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಡಿವೈಎಸ್ಪಿ ದಿನಕರ ಶೆಟ್ಟಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ತಮ್ಮ ಸಿಬ್ಬಂದಿಗಳ ಸಮಸ್ಯೆಯನ್ನು ಅರಿತು ಪ್ರತಿ ದಿನ ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ತಂಪು ಪಾನೀಯ ಸರಬರಾಜು ಮಾಡುತ್ತಿರುವ ದೃಶ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಗೌರವ ಮೂಡಿಸುವಂತಾಗಿದೆ.
- ಸಿಂಚು