ಚೆಟ್ಟಳ್ಳಿ, ಮಾ. 26: ವೀರಾಜಪೇಟೆ ಸಮೀಪದ ಕಡಂಗದಲ್ಲಿ ನಡೆದ ನಾಲ್ಕನೇ ವರ್ಷದ ಕಡಂಗ ಪ್ರೀಮಿಯರ್ ಲೀಗ್(ಕೆಪಿಎಲ್) ಕ್ರಿಕೆಟ್ ಪಂದ್ಯಾಟದಲ್ಲಿ ರೇಸಿಂಗ್ ಸ್ಟಾರ್ ತಂಡವು ರೆಡ್ ಬ್ಯಾಕ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
53 ರನ್ ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ರೆಡ್ ಬ್ಯಾಕ್ ತಂಡವು 11 ರನ್ಗಳ ಸೋಲು ಅನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಟೈಟನ್ಸ್ ಹಾಗೂ ರೆಡ್ ಬ್ಯಾಕ್ ತಂಡಗಳ ನಡುವೆ ನಡೆದ ಪಂದ್ಯಾಟವು ಡ್ರಾ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ನಲ್ಲಿ ರೆಡ್ ಬ್ಯಾಕ್ ತಂಡವು ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು. ರೈಸಿಂಗ್ ಸ್ಟಾರ್ ಹಾಗೂ ವೆಸ್ಟರ್ನ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ ತಂಡವು ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ರೆಡ್ ಬ್ಯಾಕ್ ತಂಡದ ಯೂನುಸ್ ಪಡೆದುಕೊಂಡರು. ಮುಂದಿನ ವರ್ಷ ನಡೆಯುವ 5ನೇ ವರ್ಷದ ಕೆಪಿಎಲ್ ಪಂದ್ಯಾಟದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಆಯ್ಕೆಯಾದರು. ಸದಸ್ಯರಾಗಿ ಕರೀಂ, ಸುಬೀರ್, ಸಮದ್, ಇಕ್ಬಾಲ್, ನೌಶಾದ್, ಶಾನಿದ್,ಶರೀಫ್ ಆಯ್ಕೆಯಾದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಕೊಡೀರ ಪ್ರಸನ್ನ , ಕಣಿಯರ ಪ್ರಕಾಶ್, ಕರೀಂ, ಮಮ್ಮದ್, ಅಬೂಬಕರ್, ಗಫೂರ್, ಸಮದ್, ಕ್ರೀಡಾಕೂಟದ ಆಯೋಜಕರಾದ ಅಸ್ಕರ್, ನೌಷಾದ್, ಜುನೈದ್, ಅಜರ್,ಯೂನುಸ್, ಸಮೀರ್ ಇದ್ದರು ಕಾರ್ಯಕ್ರಮವನ್ನು ಕೆಪಿಎಲ್ ಸಂಚಾಲಕ ನೌಫಲ್ ಎಂ.ಬಿ. ಸ್ವಾಗತಿಸಿ, ವಂದಿಸಿದರು.