ಮಡಿಕೇರಿ, ಮಾ. 25 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯಾಗಿರುವ, ಹಾಲಿ ಸಂಸದ ಪ್ರತಾಪ್‍ಸಿಂಹ ಅವರಿಂದು ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ತಮ್ಮ ಉಮೇದುವಾರಿಕೆ ಸಲ್ಲಿಸುವದರ ಮೂಲಕ ಅಖಾಡಕ್ಕೆ ದುಮುಕ್ಕಿದ್ದಾರೆ.ಇಂದು ಬೆಳಿಗ್ಗೆ ತಮ್ಮ ಪತ್ನಿ ಅರ್ಪಿತಾ, ಪುತ್ರಿ ವಿಪಾಂಚಿಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಆ ಬಳಿಕ ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ಕೋಟೆ ಶ್ರೀ ಆಂಜನೇಯ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.ಬೃಹತ್ ರ್ಯಾಲಿ : ಆ ಬಳಿಕ ಕೋಟೆ ಆಂಜನೇಯ ದೇವಾಲಯ ದಿಂದ ಪಕ್ಷದ ನಾಯಕರುಗಳು ಸೇರಿದಂತೆ ಸುಮಾರು 3500ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆಗಾಗಿ ಜಿಲ್ಲಾಧಿಕಾರಿಗಳ ಬಳಿಗೆ ಬೃಹತ್ ರ್ಯಾಲಿಯೊಂದಿಗೆ ಆಗಮಿಸಿದರು. ಸುಮಾರು ಮಧ್ಯಾಹ್ನ 12.15ರ ವೇಳೆಗೆ ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಮೈಸೂರು ಶಾಸಕ ಎಸ್.ಎ. ರಾಮದಾಸ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್
(ಮೊದಲ ಪುಟದಿಂದ) ಅವರಿಗೆ ಎರಡು ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದರು.
ರ್ಯಾಲಿಯಲ್ಲಿ ಜಿಲ್ಲೆಯ ಶಾಸಕರುಗಳ ಸಹಿತ ಎಲ್. ನಾಗೇಂದ್ರ, ಬಿಜೆಪಿ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘು ಕೌಟಿಲ್ಯ, ಚಿತ್ರನಟಿ ತಾರಾ ಅನುರಾಧ ಸೇರಿದಂತೆ ಜಿಲ್ಲೆಯಿಂದ ತೆರಳಿದ್ದ ನೂರಾರು ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಫ್.ಐ.ಆರ್. : ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪಕ್ಷ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಬುಕ್‍ಲೆಟ್‍ಗಳಲ್ಲಿ ವಿತರಣೆ ಮಾಡಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ವಿ.ವಿ. ಪುರಂ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಮೊಕದ್ದಮೆ ದಾಖಲಾಗಿದೆ.