ಶನಿವಾರಸಂತೆ, ಮಾ. 25: ವಚನ ಸಾಹಿತ್ಯ ಅನುಭಾವ ಗದ್ಯವಾಗಿದ್ದು ಶರಣರು ಸಂಸ್ಕøತಿಗೆ ಕೊಟ್ಟ ಅಮೂಲ್ಯ ಕಾಣಿಕೆ ಎಂದು ಚಿಕ್ಕಅಳುವಾರದ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠ ಗುರು ಸಿದ್ಧಸ್ವಾಮಿ ವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ವರ್ತಮಾನಕ್ಕೂ ವಚನ ಕಾರ್ಯಕ್ರಮದ ಚಿಂತನಾಗೋಷ್ಠಿ-1 ರಲ್ಲಿ ವಚನ ಕ್ರಾಂತಿಯ ಪ್ರತಿಭಟನೆ ಮತ್ತು ಪರ್ಯಾಯ ಸ್ಥಾಪನೆಯ ನೆಲೆಗಳು ಎಂಬ ವಿಚಾರ ಮಂಡಿಸಿ ಅವರು ಮಾತನಾಡಿದರು.

ವಚನಕಾರರು ಸಮಾಜದಲ್ಲಿ ಸಮಾನತೆಗೆ ಕ್ರಾಂತಿಯನ್ನುಂಟು ಮಾಡಿದರು. ಅಂದು ಬಸವಣ್ಣನವರ ಕಾಲದಲ್ಲೇ ಮಹಿಳೆಯರಿಗೆ ಸಮಾನತೆ ಇತ್ತು. ಇಂದು ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ಸಮಾನತೆಗಾಗಿ ಹೋರಾಡುತ್ತಲೇ ಇದ್ದಾರೆ. ಅಕ್ಕಮಹಾದೇವಿ ಸಮಾನತೆಗಾಗಿ ಹೋರಾಡಿದ ಪ್ರಥಮ ಮಹಿಳೆ ಶರಣರು, ಮುಖವಾಡದ ಬದುಕಲ್ಲ.

ಅಂತರಂಗ - ಬಹಿರಂಗ ಶುದ್ಧವಾಗಿತ್ತು. ಬಸವಣ್ಣ ಪವಾಡ ಪುರುಷರಲ್ಲ ಕ್ರಾಂತಿ ಪುರುಷ. ಲಿಂಗತಾರತಮ್ಯ ಜಾತಿ ತಾರತಮ್ಯ, ವರ್ಣ ತಾರತಮ್ಯ ಪ್ರಶ್ನೆ ಮಾಡಿದ ಎದೆಗಾರಿಕೆ ವಚನಕಾರರಲ್ಲಿತ್ತು. ವಚನ ಸಾಹಿತ್ಯವೇ ತತ್ವಜ್ಞಾನವಾಗಿ ಮಾನವೀಯ ಮೌಲ್ಯಗಳನ್ನು ಬಿತ್ತಿತ್ತು ಎಂದು ಜಮೀರ್ ಅಹ್ಮದ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷ ಅಬ್ದುಲ್ ರಬ್ ಮಾತನಾಡಿ, ಚಿಂತನಾಗೋಷ್ಠಿ ಜ್ಞಾನ ಭಂಡಾರ ಹೆಚ್ಚಿಸುವಂತಹ ಕಾರ್ಯಕ್ರಮ. ಸಾಹಿತ್ಯ, ಸಂಸ್ಕøತಿಯ ಬೆಳವಣಿಗೆಯಲ್ಲಿ ವಚನಗಳಿಗೆ ಪ್ರಥಮ ಸ್ಥಾನವಿದೆ. ಶರಣರ ಸ್ಮರಣೆಯಲ್ಲಿ ವಚನಗಳ ಪರಿಪಾಲನೆಯಲ್ಲಿ ಜೀವನದ ಸಾರ್ಥಕವಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಶಂಭುಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪ್ರೇಮನಾಥ್, ತಾಲೂಕು ಘಟಕದ ಅಧ್ಯಕ್ಷ ಮಹಾದೇವಪ್ಪ, ಮುಖಂಡರುಗಳಾದ ವೇದಕುಮಾರ್, ಭುವನೇಶ್ವರಿ, ದಿನೇಶ್ ಮಾಲಂಬಿ, ಉದಯಕುಮಾರ್, ಶಿಕ್ಷಕಿ ರೂಪಾ ಉಪಸ್ಥಿತರಿದ್ದರು.