ಶನಿವಾರಸಂತೆ, ಮಾ. 25: ಅಗ್ರಜ-ಅಂತ್ಯಜ ವರ್ಣಾಶ್ರಮ ಧರ್ಮದ ಎರಡು ಧ್ರುವಗಳು ಎಂದು ಸಾರಿದ ಶರಣರ ಚಿಂತನೆ ಸರ್ವ ಶ್ರೇಷ್ಠವಾದುದು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠ ಗುರು ಸಿದ್ಧಸ್ವಾಮಿ ವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ವರ್ತಮಾನಕ್ಕೂ ವಚನ ಚಿಂತನಾಗೋಷ್ಠಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನ ಸ್ಮರಣೀಯ ಕಾಲವಾಗಿದ್ದು, ಶರಣರ ಚಿಂತನೆ, ಮೌಲ್ಯಯುತ ನುಡಿ ಎಲ್ಲಾ ಕಾಲಕ್ಕೂ, ಎಲ್ಲಾ ಪೀಳಿಗೆಗೂ ದಾರಿದೀಪ.

ಪರಂಪರಾಗತವಾಗಿ ಬಂದಂತಹ ವಚನಗಳು ಎಲ್ಲಾ ಕಾಲಘಟ್ಟಕ್ಕೂ ಅನ್ವಯವಾಗುತ್ತವೆ. ಬಸವಣ್ಣನವರ ವಿಚಾರಧಾರೆ ಸ್ವತಂತ್ರ ಭಾರತದಲ್ಲಿ ಮಹತ್ತರವಾದುದು. ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನ ಹಾಗೂ ಮೇಲಸ್ತರದವರ ಸೌಲಭ್ಯ ಕೆಳಸ್ತರದವರಿಗೂ ದೊರೆಯಬೇಕು ಎಂಬ ಚಿಂತನೆ ಅನುಕರಣೀಯ ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಲೇಖಕಿ ಸುರಭಿ ಪ್ರಸಾದ್ ಅವರ ‘ನೀರವತೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಹಿರಿಯ ವಕೀಲ ಹಾಗೂ ಸರಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ ಅವರು ಮಾತನಾಡಿ, 12ನೇ ಶತಮಾನ ವಚನ ಸಾಹಿತ್ಯಕ್ಕೆ ನಾಂದಿ ಹಾಡಿತು. ಭಕ್ತಿಗೆ ಬುನಾದಿಯಾಯಿತು. ನೈತಿಕ ಸ್ಥೈರ್ಯ ಮೂಡಿಸಿ ನೊಂದವರಿಗೆ ನ್ಯಾಯ ದೊರಕಿಸಿದ ಕಾಲವಾಗಿತ್ತು ಎಂದರು.

ಮಾಜಿ ಸೈನಿಕ ಕೆ.ವಿ. ಮಂಜುನಾಥ್, ಲೇಖಕಿ ಸುರಭಿ ಪ್ರಸಾದ್ ಮಾತನಾಡಿದರು. ಅರುಣಾ ಚಂದ್ರಮೌಳಿ ವಚನಗಳನ್ನು ಹಾಡಿದರು. ಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿ.ಕೆ. ಯರೀಶ್, ಲೇಖಕಿ ನಯನಪ್ರಕಾಶ್ಚಂದ್ರ, ಕಾಫಿ ಬೆಳೆಗಾರರಾದ ಕೆ.ಎಸ್. ಸಂದೀಪ್, ಜಿ.ಎಂ. ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.