ಮಡಿಕೇರಿ: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೇಮಾಡುವಿನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸ್ಮಶಾನ ಜಾಗದ ವಿವಾದವನ್ನು ಇತ್ಯರ್ಥಪಡಿಸದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೇಮಾಡುವಿನ ಪರಿಶಿಷ್ಟ ಜಾತಿಯವರಿಗೆ ಸೇರಿದ ಸ್ಮಶಾನ ಜಾಗವನ್ನು ಕ್ರಿಕೆಟ್ ಸಂಸ್ಥೆಯವರಿಗೆ ಮಂಜೂರು ಮಾಡಿದ ಪರಿಣಾಮ ಹುಟ್ಟಿಕೊಂಡಿರುವ ವಿವಾದವನ್ನು ಇರುವರೆಗೆ ಇತ್ಯರ್ಥ ಮಾಡುವಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು. ಸಮಸ್ಯೆ ಬಗೆಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರದ ಜೊತೆಗೆ ಯಾವದೇ ಪಕ್ಷದವರಿಗೂ ಕಾಲೋನಿಯಲ್ಲಿ ಮತಯಾಚನೆಗೆ ಅವಕಾಶ ನೀಡುವದಿಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘಟನೆ ಮಹಿಳಾ ಅಧ್ಯಕ್ಷೆ ಪಿ.ಎ. ಕುಸುಮಾವತಿ, ಭೀಮಸೇನಾ ಸಮಿತಿಯ ನಿಶಿತ್‍ಕುಮಾರ್, ಮಾಯದೇವಿ ಮಹಿಳಾ ಸಂಘದ ಎ.ಪಿ. ಹೇಮಾವತಿ ಹಾಗೂ ಹೆಚ್.ಆರ್. ಭವ್ಯ ಉಪಸ್ಥಿತರಿದ್ದರು.
ಗೋಣಿಕೊಪ್ಪ ವರದಿ: ಇತಿಹಾಸದಲ್ಲಿ ಡಾಂಬರು ಕಾಣದ ಕುಟ್ಟಂದಿ-ಗುಡ್ಡಮಾಡು-ಕೊಂಗಣ ರಸ್ತೆ ಅಭಿವೃದ್ಧಿಗೆ ಹಿಂದೇಟು ಹಾಕುತ್ತಿರುವ ಸರ್ಕಾರದ ನಡೆಯನ್ನು ವಿರೋಧಿಸಿ ಆ ಭಾಗದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕುಟ್ಟಂದಿ-ಗುಡ್ಡಮಾಡು-ಕೊಂಗಣ ಗ್ರಾಮಸ್ಥರುಗಳಾದ ಸಿ.ಪಿ. ರೋಹಿತ್, ಸಿ.ಎಸ್. ಈರಪ್ಪ, ಸಿ.ಎಸ್. ಗಣಪತಿ, ಪಿ.ಸಿ. ಮನು, ಎ.ಎ. ರಂಜನ್, ಸಿ.ಕೆ. ಜಗನ್, ಎಂ.ಎಸ್. ದರ್ಶನ್ ಹಾಗೂ ಎಂ.ಜಿ. ಬೋಪ್ಯಯ ಇವರುಗಳು ಕೂಡಲೇ ಈ ರಸ್ತೆಗೆ ಡಾಂಬರು ಮಾಡುವ ಮೂಲಕ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.
ಹಲವು ವರ್ಷಗಳಿಂದ ಸಾಕಷ್ಟು ಬಾರಿ ಈ ಬಗ್ಗೆ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದರೂ ಸ್ಪಂದನ ದೊರೆತಿಲ್ಲ. ಕುಟ್ಟಂದಿ-ಗುಡ್ಡಮಾಡು-ಕೊಂಗಣ ಗ್ರಾಮಗಳಿಗೆ ತೆರಳುವ ರಸ್ತೆಯ ಮಧ್ಯ ಭಾಗದಲ್ಲಿ ಡಾಂಬರು ಮಾಡದೆ ಹಾಗೆ ಬಿಡಲಾಗಿದೆ. ಇದರಿಂದ ಶಾಲಾ ಬಸ್ ಮಾಲೀಕರು ಬಸ್ ಓಡಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವಾಹನಗಳು ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಾಗಿ ಕೂಡಲೇ ಸ್ಪಂದಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರದ ಮೂಲಕ ನಮ್ಮ ಆಕ್ರೋಶವನ್ನು ಸಮಾಜಕ್ಕೆ ತಿಳಿಸಲಾಗುವದು ಎಂದು ಎಚ್ಚರಿಸಿದ್ದಾರೆ.
ಮಡಿಕೇರಿ: ಕಳೆದ ಸಾಲಿನ ಪ್ರಕೃತಿ ವಿಕೋಪದ ಸಂದರ್ಭ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ನಗರದ ಮುಳಿಯ ಬಡಾವಣೆÉ ಹಾಗೂ ವಿದ್ಯಾನಗರ ನಿವಾಸಿಗಳಿಗೆ ಯಾವದೇ ಪರಿಹಾರ ದೊರಕದೆ ಇರುವದರಿಂದ ಲೋಕಸಭೆ ಮತ್ತು ನಗರಸಭೆÉ ಚುನಾವಣೆÉ ಬಹಿಷ್ಕರಿಸುವದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಮುಳಿಯ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷ ಪಿ.ಎಂ. ಸುರೇಶ್ ಹಾಗೂ ಇತರರು, ಮಳೆಗಾಲದಲ್ಲಿ ಮುಳಿಯ ಬಡಾವಣೆ ಮತ್ತು ಸುತ್ತಮುತ್ತಲ ಭಾಗ ಸಮುದ್ರದಂತೆ ಭಾಸವಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ದೋಣಿಯ ಮೂಲಕ ಅಲ್ಲಿನ ನಿವಾಸಿಗಳನ್ನು ಪಾರು ಮಾಡಲಾಗಿತ್ತಾದರು, ಆ ಬಳಿಕ ನಗರ ಸಭೆಯಿಂದ ಯಾವದೇ ಸ್ಪಂದನ ದೊರಕಿಲ್ಲವೆಂದು ದೂರಿದರು.
ಆ ಬಳಿಕ ನಗರಸಭೆ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಅವರು ನಗರಸಭೆಯಿಂದ ಯಾವದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಟೀಕಿಸಿದ ಅವರು, ಸಂತ್ರಸ್ತರ ಪೈಕಿ ಹಲವಾರು ಮಂದಿ ಮಾಜಿ ಸೈನಿಕರೂ ಇದ್ದು, ಮಡಿಕೇರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ ಸಂದರ್ಭ ಮಾಜಿ ಸೈನಿಕರು ಅರ್ಜಿ ನೀಡಿದಾಗ, ಸೈನಿಕ ಇಲಾಖೆಯ ಮೂಲಕ ಅರ್ಜಿ ನೀಡುವಂತೆ ಸೂಚಿಸಿದ್ದರು. ಆ ಬಳಿಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು ಇದುವರೆಗೆ ಯಾವದೇ ಪ್ರತಿಕ್ರಿಯೆ ದೊರಕಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಟಿ. ಗಣೇಶ್, ಸಂಜು ಅಚ್ಚಯ್ಯ, ಪಿ.ಎನ್. ಬಸಪ್ಪ, ಜಯಂತಿ ಮತ್ತಿತರರು ಉಪಸ್ಥಿತರಿದ್ದರು.