ಮಡಿಕೇರಿ, ಮಾ. 25 : ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಸುಬ್ರಹ್ಮಣ್ಯ ಬೆಟ್ಟ ಶ್ರೇಣಿಯ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹಾಗೂ ಬೆಟ್ಟ ಸಾಲಿನ ಆಯಕಟ್ಟಿನ ಪ್ರದೇಶಗಳ ಇಂಚು ಇಂಚು ಸ್ಥಳಗಳಲ್ಲಿ ನಕ್ಸಲ್ ನಿಗ್ರಹ ಪಡೆ ಕೋಂಬಿಂಗ್ ನಡೆಸುತ್ತಿದೆ. ಜಿಲ್ಲೆಗೆ ಹೊಂದಿಕೊಂಡಿರುವ ದಕ್ಷಿಣ ಕೊಡಗಿನ ಕಾಡಂಚಿನಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಯಿತು.ಮುಂದುವರಿದು ತಲಕಾವೇರಿ ವ್ಯಾಪ್ತಿಯ ಮುಂಡ್ರೋಟು, ಪುಷ್ಪಗಿರಿ ವನ್ಯಧಾಮ ಪ್ರದೇಶಗಳ ದಟ್ಟ ಕಾನನವನ್ನು ಜಾಲಾಡಿರುವ ಕಾರ್ಯ ಪಡೆ ನಿನ್ನೆ ದಿನವಿಡೀ ಉಪ್ಪಿನಂಗಡಿ ಮತ್ತು ಕಡಬ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕೋಂಬಿಂಗ್ ನಡೆಸಿರುವದು ದೃಢಪಟ್ಟಿದೆ. ಆ ಮುಖಾಂತರ ನಕ್ಸಲರ ಬಗ್ಗೆ ಅನುಕಂಪ ಹೊಂದಿರುವ ಸಮಾಜಘಾತುಕರಿಗೆ ಸ್ಪಷ್ಟ ಎಚ್ಚರಿಕೆ ಸಂದೇಶದೊಂದಿಗೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಆಯ ವಸತಿ ಪ್ರದೇಶದ ಜನತೆ ಮುಕ್ತ ವಾತಾವರಣದಲ್ಲಿ ಮತದಾನದಲ್ಲಿ ಭಾಗವಹಿಸಲು (ಮೊದಲ ಪುಟದಿಂದ) ಸ್ಥೈರ್ಯ ತುಂಬುವ ಕೆಲಸ ಇದಾಗಿದೆ ಎಂದು ಮೂಲಗಳು ಖಾತರಿಪಡಿಸಿದೆ.
ಈ ಕಾರ್ಯಾಚರಣೆಯಲ್ಲಿ ಬಾಗಿಮಲೆ ಅರಣ್ಯ ವ್ಯಾಪ್ತಿ ಮುಖಾಂತರ ಉಪ್ಪಿನಂಗಡಿ ಮಾರ್ಗವಾಗಿ ಸಾಗುವ ರೈಲ್ವೆ ಹಾದಿಯ ಸಿರಿಬಾಗಿಲು ಇನ್ನಿತರ ಸೂಕ್ಷ್ಮ ಪ್ರದೇಶಗಳಲ್ಲಿ ಮುಂದು ವರಿದಿದೆ. ನಕ್ಸಲ್ ನಿಗ್ರಹ ಕಾರ್ಯಪಡೆಯ ಮೂರು ತಂಡಗಳು ಶಸ್ತ್ರಸಜ್ಜಿತಗೊಂಡು ಕೋಂಬಿಂಗ್‍ನಲ್ಲಿ ನಿರತವಾಗಿದೆ ಎಂದು ವಿಶ್ವಾಸನೀಯ ಮೂಲಗಳು ದೃಢಪಡಿಸಿದೆ.