ಮಡಿಕೇರಿ, ಮಾ. 25: ಮಡಿಕೇರಿಗೆ ಶಾಶ್ವತ ಕುಡಿಯುವ ನೀರನ್ನೊದಗಿಸುವ ಕುಂಡಾಮೇಸ್ತ್ರಿ ಯೋಜನೆ ಕಾಮಗಾರಿ ಸಂದರ್ಭ ಪೈಪ್ ಅಳವಡಿಸುವ ಸಲುವಾಗಿ ಕಚ್ಚಾರಸ್ತೆಯನ್ನು ಹಾಳುಗೆಡವಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ಸುರಿದು ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ನಗರಸಭೆ ಹಾಗೂ ಒಳಚರಂಡಿ ಮಂಡಳಿಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಮಣ್ಣು ಹೊತ್ತು ತಂದಿದ್ದ ಲಾರಿ ಹಾಗೂ ಜೆಸಿಬಿ ಯಂತ್ರವನ್ನು ತಡೆಹಿಡಿದು ವಾಪಸ್ ಕಳುಹಿಸಿರುವ ಪ್ರಸಂಗ ನಡೆದಿದೆ.ಕಾಮಗಾರಿ ಸಂದರ್ಭ ಪೈಪ್ ಅಳವಡಿಸಲೆಂದು ಉತ್ತಮ ಸ್ಥಿತಿಯಲ್ಲಿದ್ದ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಕಲ್ಲು ಬಳಿಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕಚ್ಚಾರಸ್ತೆಯನ್ನು ಜೆಸಿಬಿಯಿಂದ ಕೊರೆದು ಹಾಳುಗೆಡವಲಾಗಿದೆ. ಕಾಮಗಾರಿ ಬಳಿಕ ಡಾಮರು ರಸ್ತೆ ಮಾಡಿಕೊಡುವದಾಗಿ ಜನ ಪ್ರತಿನಿಧಿಗಳು, ಅಧಿಕಾರಿಗಳು ನೀಡಿದ್ದ ಭರವಸೆಗಳು ಹುಸಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ರಸ್ತೆ ಮಾಡಿಕೊಡದಿದ್ದಲ್ಲಿ ಏ. 1ರಿಂದ ಮಡಿಕೇರಿಗೆ ನೀರು ಸರಬರಾಜು ಮಾಡುವದನ್ನು ತಡೆಹಿಡಿಯುವದಾಗಿ ಎಚ್ಚರಿಕೆ ನೀಡಿದರು. ಹಾಗಾಗಿ ಇಂದು ಒಳಚರಂಡಿ ಮಂಡಳಿ ಹಾಗೂ ನಗರಸಭೆ ಮೂಲಕ ರಸ್ತೆಯಲ್ಲಿನ ಗುಂಡಿಗಳಿಗೆ (ಮೊದಲ ಪುಟದಿಂದ) ಮಣ್ಣು ತುಂಬಿ ಸರಿಪಡಿಸಲು ಲಾರಿಯಲ್ಲಿ ಮಣ್ಣು ಹಾಗೂ ಜೆಸಿಬಿ ಯಂತ್ರವನ್ನು ಕಳುಹಿಸಲಾಗಿತ್ತು.
ವಿಷಯ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಮಣ್ಣು ಸುರಿಯುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಮಣ್ಣು ತುಂಬಿದರೆ ಮಳೆಗಾಲದಲ್ಲಿ ಮತ್ತೆ ಸಮಸ್ಯೆಯುಂಟಾಗಲಿದೆ ಎಂದು ವಾಹನಗಳನ್ನು ತಡೆದಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಒಳಚರಂಡಿ ಮಂಡಳಿ ಸಹಾಯಕ ಅಭಿಯಂತರ ನಿರಂಜನ್ ಹಾಗೂ ನಗರಸಭೆ ಸಹಾಯಕ ಅಭಿಯಂತರ ಜೀವನ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ತಾತ್ಕಾಲಿಕ ವ್ಯವಸ್ಥೆ ಬೇಡ, ಸಮರ್ಪಕ ರಸ್ತೆಯೊಂದಿಗೆ ಚರಂಡಿ ಕೂಡ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ. ಸಮಾಧಾನಪಡಿಸಿದ ಅಭಿಯಂತರರು ನಾಳೆ ಮೋರಿಗಳನ್ನು ಅಳವಡಿಸಲಾಗುವದು. ನಂತರ ಏಪ್ರಿಲ್ ತಿಂಗಳಿನಲ್ಲಿ ರಸ್ತೆ ನಿರ್ಮಿಸಿಕೊಡುವದಾಗಿ ಭರವಸೆ ನೀಡಿದ ಮೇರೆಗೆ ನಾಳೆವರೆಗೆ ಗಡುವು ನೀಡಿ ವಾಹನಗಳನ್ನು ವಾಪಸ್ ಕಳುಹಿಸಿಕೊಡಲಾಯಿತು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಸುಭಾಶ್ ಆಳ್ವ, ಕೊಂಬಾರನ ಗಣಪತಿ, ಲಿಂಗರಾಜು, ಉಡುದೋಳಿ ಕುಟುಂಬಸ್ಥರು, ಗ್ರಾಮಸ್ಥರು ಇದ್ದರು.