ಸೋಮವಾರಪೇಟೆ, ಮಾ. 25: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ವೆಂಟ್ ಬಾಣೆ ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಕಾಮಗಾರಿಯನ್ನು ಕೆಲ ರಾಜಕೀಯ ವ್ಯಕ್ತಿಗಳ ಕುತಂತ್ರದಿಂದ ಬದಲಾಯಿಸಲು ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಗ್ರಾಮಸ್ಥರು, ಇದೀಗ ಅಧಿಕಾರಿಗಳ ಭರವಸೆಯಿಂದ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.
ಕಾನ್ವೆಂಟ್ ಬಾಣೆ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ನೀಡಲಾಗಿದ್ದರೂ ಸಹ ಬೇರೆ ಕಡೆಗೆ ಕಾಮಗಾರಿಗಳನ್ನು ವರ್ಗಾಯಿಸಲು ಕೆಲ ರಾಜಕೀಯ ಮುಖಂಡರು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬೇರೆಡೆಗೆ ಕಾಮಗಾರಿ ವರ್ಗಾಯಿಸಲು ಮುಂದಾದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ಪರಿಶೀಲನೆ ನಡೆಸಿದರು.
ಉದ್ದೇಶಿತ ಕಾಮಗಾರಿ ನಡೆಯುವ ಸ್ಥಳದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಂದಿ ವಾಸವಿದ್ದು, ಕಾಂಕ್ರೀಟೀಕರಣ ಮತ್ತು ರಸ್ತೆ ಕಾಮಗಾರಿಯನ್ನು ಇದೇ ಸ್ಥಳದಲ್ಲಿ ಮುಂದುವರೆಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಮೇರೆ, ಆ ಭಾಗದ ಮಂದಿ ಲೋಕಸಭಾ ಚುನಾವಣಾ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.