ಮಡಿಕೇರಿ, ಮಾ. 24: ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪುನರ್ ವಸತಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆಯಲ್ಲಿ ಯಾವದೇ ರೀತಿಯ ವ್ಯತ್ಯಯ ಉಂಟಾಗಬಾರದು. ಸಾರ್ವಜನಿಕರಿಂದ ದೂರುಗಳು ಕೇಳಿ ಬರಬಾರದು ಎಂದು ಅವರು ತಿಳಿಸಿದರು.
ಪ್ರಕೃತಿ ವಿಕೋಪ ಸಂತ್ರಸ್ತರಿಗಾಗಿ ನಿರ್ಮಾಣ ಮಾಡಲಾಗುತ್ತಿರುವ ವಸತಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಮಳೆಗಾಲ ಆರಂಭವಾಗುವದರೊಳಗೆ ಸಾಧ್ಯವಾದಷ್ಟು ಮನೆ ಹಸ್ತಾಂತರಕ್ಕೆ ಪ್ರಯತ್ನಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಳಿದರು.
ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಹಲವು ರಸ್ತೆಗಳು ಕುಸಿದಿವೆ. ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಹಾಗೆಯೇ ರಸ್ತೆ ಕುಸಿದಿರುವ ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಮಳೆಗೆ ಸಮಸ್ಯೆ ಎದುರಾಗಬಹುದು ಎಂದು ಎಚ್ಚರಿಸಿದರು.
ಪ್ರಕೃತಿ ವಿಕೋಪದಡಿ ಕೈಗೊಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಪಂಚಾಯತ್ ರಾಜ್, ಲೋಕೋಪಯೋಗಿ, ಪಿಎಂಜಿಎಸ್ವೈ ಇತರ ಇಲಾಖೆಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ಇದುವರೆಗೆ ಅಂದಾಜು ಪಟ್ಟಿ ಸಲ್ಲಿಸದಿರುವದಕ್ಕೆ ಅತೃಪ್ತಿ ವ್ಯಕ್ತಿಡಿಸಿದ ಕಾರ್ಯದರ್ಶಿ, ಮರಗಳು ಬಿದ್ದು ಭೂಮಿಯಲ್ಲಿ ಹೂತು ಹೋಗಿವೆ. ಇವುಗಳನ್ನು ಮೇಲೆತ್ತಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆ ನಿಟ್ಟನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗುವಂತೆ ನಿರ್ದೇಶನ ನೀಡಿದರು.
ಮರ ತೆಗೆದ ನಂತರ ಮರ ಯಾರಿಗೆ ಸೇರಿದ್ದು ಎಂಬದನ್ನು ತೀರ್ಮಾನಿಸೋಣ, ಸದ್ಯ ಭೂಮಿಯಲ್ಲಿ ಹೂತು ಹೋಗಿರುವ ಮರಗಳನ್ನು ಹೊರತೆಗೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ಮಳೆಗಾಲಕ್ಕೆ ತೊಂದರೆ ಯಾಗಲಿದೆ ಎಂದರು. ಮತ್ತೆ ಮಳೆ ಆರಂಭವಾಗುವದರಿಂದ ಮರ ಮತ್ತೊಂದು ಜಮೀನಿಗೆ ಹೋಗಿರುತ್ತದೆ. ಆದ್ದರಿಂದ ಮಳೆ ನೀರು ಸರಾಗವಾಗಿ ಹೋಗುವಂತಾಗಲು ಹೂತಿರುವ ಮರ ತೆಗೆಯುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನೆಗಳ ನಿರ್ಮಾಣ ಕಾಮಗಾರಿಯು ಮಾದಾಪುರ, ಕರ್ಣಂಗೇರಿ, ಮದೆನಾಡುಗಳಲ್ಲಿ ನಡೆಯುತ್ತಿವೆ. ವಸತಿ ಪ್ರದೇಶದಲ್ಲಿ ಕುಡಿಯುವ ನೀರು, ಚರಂಡಿ, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯವನ್ನು ಕಲ್ಪಿಸಬೇಕಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪ ಸಂಬಂಧಿಸಿ ದಂತೆ ಮನೆಗಳ ನಿರ್ಮಾಣ, ಪರಿಹಾರ ವಿತರಣೆ ಮತ್ತಿತರ ವಿಚಾರಗಳ ಕುರಿತು ಮಾಹಿತಿ ನೀಡಿದರು. ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ಫೋಸಿಸ್ ವತಿಯಿಂದ ಏಪ್ರಿಲ್ ಮೊದಲ ವಾರದಲ್ಲಿ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭಿಸ ಲಾಗುವದು ಎಂದು ಇನ್ಫೋಸಿಸ್ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ 177 ಕುಟುಂಬಗಳ ಬ್ಯಾಂಕ್ ಖಾತೆ, ಐಎಫ್ಎಸ್ಸಿ ಕೋಡ್ ಸಮರ್ಪಕವಾಗಿರಲಿಲ್ಲ, ಸದ್ಯ ಈಗ 177 ಸಂತ್ರಸ್ತ ಕುಟುಂಬಗಳ ಬ್ಯಾಂಕುಗಳ ಖಾತೆ ಹಾಗೂ ಐಎಫ್ಎಸ್ಸಿ ಕೋಡ್ ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಪಂಚಾಯತ್ ರಾಜ್ ಕಾರ್ಯಪಾಲಕ ಇಂಜಿನಿಯರ್ ರೇವಣ್ಣವರ್, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು, ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭಾರತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಇತರರು ಇದ್ದರು.