ಕೂಡಿಗೆ, ಮಾ. 24: ಶಿರಂಗಾಲದ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ತಾಯಿಯ ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಮಂಟಿಗಮ್ಮ ತಾಯಿಯ ಮೂಲ ಸ್ಥಾನವಾದ ಕೋಟೆಯಿಂದ ಬನದ ದೇವಸ್ಥಾನಕ್ಕೆ ತಾಯಿಯ ಉತ್ಸವವನ್ನು ಮಂಗಳ ವಾದ್ಯದೊಂದಿಗೆ ಕರೆದೊಯ್ಯಲಾಯಿತು. ನಂತರ ರಾತ್ರಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಶಿರಂಗಾಲ, ಮಣಜೂರು, ಮೂಡಲಕೊಪ್ಪಲು, ನಲ್ಲೂರು, ಸಾಲುಕೊಪ್ಪಲು ಸೇರಿದಂತೆ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಯ ಭಕ್ತಾದಿಗಳು ಭಾಗವಹಿಸಿದ್ದರು. ಪೂಜೋತ್ಸವದ ಅಂಗವಾಗಿ ದೇವಾಲಯ ಸಮಿತಿಯ ವತಿಯಿಂದ ವಿವಿಧ ಕ್ರೀಡಾ ಪಂದ್ಯಾವಳಿಗಳನ್ನು ನಡೆಸಲಾಯಿತು. ಸ್ಥಳೀಯ ಗ್ರಾಮಸ್ಥರು ಶನಿಮಹಾತ್ಮ ಹಾಗೂ ರಾಜವಿಕ್ರಮ ನಾಟಕವನ್ನು ಪ್ರದರ್ಶಿಸಿದರು. ಅಲ್ಲದೇ ಶ್ರೀ ಮಂಟಿಗಮ್ಮ ಕೃಪಾ ಪೋಷಿತ ನಾಟಕ ಮಂಡಳಿಯು ಸಂತೆ ಮೈದಾನದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಿದರು.