ಶನಿವಾರಸಂತೆ, ಮಾ. 24: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3ನೇ ವಿಭಾಗದಲ್ಲಿ ಹೊಸ ಮುನ್ಸಿಪಾಲಿಟಿ ಹಾಗೂ ಮಸೀದಿ ಮುಖ್ಯ ರಸ್ತೆಯಲ್ಲಿ ಕಸ ವಿಲೇವಾರಿ ಸಮಸ್ಯೆಯಾಗಿದ್ದು, ಹಲವಾರು ಬಾರಿ ಆಡಳಿತ ಮಂಡಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ವಚ್ಛತೆ ಮತ್ತು ವಿಲೇವಾರಿ ವಾಹನದ ಬಗ್ಗೆ ವಿಚಾರಿಸಿದರೆ ಅಧ್ಯಕ್ಷೆ ಹಾಗೂ ಪಿ.ಡಿ.ಓ. ಅಸಮರ್ಪಕ ಉತ್ತರ ನೀಡುತ್ತಾರೆ ಎಂದು ಪಂಚಾಯಿತಿ ಸದಸ್ಯ ದೌಲತ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಮುನ್ಸಿಪಾಲಿಟಿ ಹಾಗೂ ಮಸೀದಿ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವದರಿಂದ ಚರಂಡಿ ಕಾಮಗಾರಿ ಮಾಡದೇ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಎಲ್ಲೆಡೆ ಕಸದ ರಾಶಿ ತುಂಬಿದ್ದು, ಕಂದಾಯ ಕಟ್ಟುವವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
ಕಸ ವಿಲೇವಾರಿಗೆ ಟ್ರ್ಯಾಕ್ಟರ್ ಖರೀದಿಸಲಾಗುವದೆಂದು ಅಧ್ಯಕ್ಷೆ ನೀಡಿದ ಭರವಸೆ ಹುಸಿಯಾಗಿದೆ. ಮೇಲಧಿಕಾರಿಗಳು ಪಂಚಾಯಿತಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ದೌಲತ್ ಹುಸೇನ್ ಆಗ್ರಹಿಸಿದ್ದಾರೆ.