ಮಡಿಕೇರಿ, ಮಾ.24 : ಕಳೆದ ವರ್ಷ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಸಮಸ್ಯೆಗಳು ಮತ್ತು ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಸಮುದಾಯ ಹಾಗೂ ಸಮಾಜಗಳ ಸಭೆ ನಡೆಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲು ಕೊಡವ ಸಮಾಜಗಳ ಒಕ್ಕೂಟದ ನಿರ್ಧರಿಸಿದೆ.

ಬಾಳುಗೋಡುವಿನಲ್ಲಿ ನಡೆದ ಕೊಡವ ಸಮಾಜಗಳ ಒಕ್ಕೂಟದ ಮಾಸಿಕ ಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಸಮಾಲೋಚಿಸಿದ ಪ್ರಮುಖರು ಸಂತ್ರಸ್ತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ನಿರ್ಧಾರ ಕೈಗೊಂಡರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ 19 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ಗಳಂತೆ ಒಟ್ಟು 1.90 ಲಕ್ಷ ನೀಡಲು ಒಕ್ಕೂಟ ನಿರ್ಧರಿಸಿತು.

ಜಿಲ್ಲೆಯಲ್ಲಿರುವ ಎಲ್ಲಾ ಸಮುದಾಯ ಮತ್ತು ಸಮಾಜದ ಮುಖಂಡರ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ರೂಪಿಸುವ ಕುರಿತು ಸಮಾಲೋಚಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಪ್ರಕೃತಿ ವಿಕೋಪ ಸಂಭವಿಸಿದಾಗ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲಾ ಸಂಘ, ಸಂಸ್ಥೆ, ಸಮಾಜ, ಸಾರ್ವಜನಿಕರು ಅಭಿನಂದನಾರ್ಹರು ಎಂದರು.

ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷÀ ನಾಪಂಡ ರವಿ ಕಾಳಪ್ಪ ಮಾತನಾಡಿ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಕಾಳಜಿ ತೋರಿದ ಒಕ್ಕೂಟದ ಕಾರ್ಯ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮದ್ಯ ಬೇಡ : ಕೊಡವ ಜನಾಂಗದ ಮದುವೆಯ ಪದ್ಧತಿಗಳಲ್ಲಿ ಒಂದಾದ ಗಂಗಾಪೂಜೆ ಸಂದರ್ಭ ಮದ್ಯ ಬಳಕೆಯನ್ನು ನಿಷೇಧ ಮಾಡುವ ಕುರಿತು ಅಮ್ಮತ್ತಿ ಕೊಡವ ಸಮಾಜ ತೆಗೆದುಕೊಂಡಿರುವ ಮಹತ್ವದÀ ತೀರ್ಮಾನವನ್ನು ಕೊಡವ ಸಮಾಜಗಳ ಒಕ್ಕೂಟ ಸ್ವಾಗತಿಸಿತು. ಅಲ್ಲದೆ ಈ ಐತಿಹಾಸಿಕ ನಿರ್ಧಾರವನ್ನು ಎಲ್ಲಾ ಕೊಡವ ಸಮಾಜಗಳು ಹಾಗೂ ಕಲ್ಯಾಣ ಮಂಟಪಗಳು ಪಾಲಿಸುವ ಮೂಲಕ ಸಹಕರಿಸುವಂತೆ ಒಕ್ಕೂಟ ಮನವಿ ಮಾಡಿತು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಮಲಚ್ಚೀರ ಬೋಸ್, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಪೋಷಕÀ ಸದಸ್ಯ ಮೇರಿಯಂಡ ಸಿ. ನಾಣಯ್ಯ, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಳಿಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ ಹಾಜರಿದ್ದರು.

ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಸ್ವಾಗತಿಸಿ, ವಂದಿಸಿದರು.