ಕುಶಾಲನಗರ, ಮಾ. 23: ಕುಶಾಲನಗರ ಸರಕಾರಿ ಇಂಜಿನಿಯ ರಿಂಗ್ ಕಾಲೇಜಿನ ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಗೊಂದಿಬಸವನಹಳ್ಳಿ ಸರಕಾರಿ ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿಶ್ವ ಜಲ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕಿ ಜಲಜಾಕ್ಷಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ವಿಶ್ವ ಜಲ ದಿನದ ಮಹತ್ವದ ಕುರಿತು ಮಾಹಿತಿ ಒದಗಿಸಿದರು.

ಶುದ್ಧ ಕುಡಿಯುವ ನೀರಿನ ಅಪವ್ಯಯ ತಡೆಗಟ್ಟಲು ಅಗತ್ಯ ಯೋಜನೆಗಳು ರೂಪುಗೊಳ್ಳಬೇಕಿದೆ. ಜೀವಜಲ ಪೋಲಾಗದಂತೆ, ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಚಿಂತನೆ ಹರಿಸುವದು ಅಗತ್ಯವಾಗಿದೆ.

ಪರಿಸರ ಪ್ರೇಮ ಬೆಳೆಸಿಕೊಳ್ಳುವ ಮೂಲಕ ನದಿ, ಪರಿಸರ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪಣ ತೊಡಬೇಕಿದೆ ಎಂದರು. ಶಾಲೆಯ ಸಹ ಶಿಕ್ಷಕಿ ಪುಷ್ಪಾವತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಜೀವನಾನುಭವದ ಅಗತ್ಯವಿದೆ. ಎನ್ನೆಸ್ಸೆಸ್ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದ ಜನಜೀವನ ಮತ್ತು ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಸಾಮಾಜಿಕ ಜ್ಞಾನ, ಬಾಂಧವ್ಯ ವೃದ್ಧಿಸಿಕೊಳ್ಳಬೇಕಿದೆ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಎನ್.ಎಸ್.ಎಸ್. ಶಿಬಿರಾಧಿಕಾರಿ ಪ್ರಸಾದ್ ಸಾಲ್ಯಾನ್, ಶಾಲೆಯ ಸಹ ಶಿಕ್ಷಕರಾದ ಸುಮ, ಶೋಭ, ಯಮುನಾ, ಶಿಬಿರಾರ್ಥಿಗಳು ಇದ್ದರು. ವಿದ್ಯಾರ್ಥಿಗಳಾದ ಜಾನ್ಹವಿ ನಿರೂಪಿಸಿದರು, ಉಲ್ಲಾಸ್ ಸ್ವಾಗತಿಸಿದರು, ಪ್ರಗತಿ ಅತಿಥಿ ಪರಿಚಯ ಮಾಡಿದರು, ಗಾಯತ್ರಿ ಪ್ರಾರ್ಥಿಸಿ ವಂದಿಸಿದರು.

ಶಿಬಿರಾರ್ಥಿಗಳು ಮತ್ತು ವಿದ್ಯಾರ್ಥಿಗಳಿಂದ ಮತದಾನದ ಮಹತ್ವ, ಆರೋಗ್ಯ ಸಂರಕ್ಷಣೆ ಕುರಿತಾದ ಜಾಗೃತಿ ಜಾಥಾ ಗೊಂದಿಬಸವನಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.