ಮಡಿಕೇರಿ, ಮಾ. 23: ಮೂರ್ನಾಡು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮೈಸೂರಿನ ವಿದ್ಯಾಶ್ರಮ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಕ್ಕೆ ಭಾಜನರಾದರು.

ನಾಲ್ಕು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಎರಡು ದಿನಗಳು ಲೀಗ್ ಪಂದ್ಯವನ್ನಾಡಿ ನಂತರದ ಎರಡು ದಿನಗಳಲ್ಲಿ ನಾಕೌಟ್ ಪಂದ್ಯವನ್ನು ಆಡಿ ಉತ್ತಮ ಪ್ರದರ್ಶನ ನೀಡಿದೆ. ಅಂತಿಮ ಬಿಕಾಂನ ವಿದ್ಯಾರ್ಥಿ ಸಿ.ಪಿ. ನರುನ್ ನಾಚಪ್ಪ ಮುಂದಾಳುತ್ವದಲ್ಲಿ ತಂಡ ಉತ್ತಮ ಪ್ರದರ್ಶನವನ್ನು ನೀಡಿತು. ಕೂಟದ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ದ್ವಿತೀಯ ಬಿಕಾಂನ ಎಂ.ಪಿ. ಅಯ್ಯಣ್ಣ ಪಡೆದುಕೊಂಡರು. ಉತ್ತಮ ಶಿಸ್ತು ತಂಡ ಎಂಬ ಪ್ರಶಸ್ತಿಗೂ ತಂಡ ಭಾಜನವಾಯಿತು.

ತರಬೇತುದಾರ ಹಾಗೂ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಕಂಬಿರಂಡ ಬೋಪಣ್ಣ ಉತ್ತಮ ತರಬೇತುದಾರ ಪ್ರಶಸ್ತಿಯನ್ನು ಪಡೆದರೆ, ವಾಣಿಜ್ಯ ಉಪನ್ಯಾಸಕ ಹರ್ಷ ಮಂದಣ್ಣ ಉತ್ತಮ ವೀಕ್ಷಕ ವಿವರಣೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.