ಕುಶಾಲನಗರ, ಮಾ. 23: ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭಗೊಂಡಿದೆ. ಇದುವರೆಗೆ ಅಲ್ಪ ಪ್ರಮಾಣದಲ್ಲಿ ಹರಿಯುತ್ತಿದ್ದ ಕಾವೇರಿ ನದಿ ಜಲಮೂಲಗಳ ಕೊರತೆಯಿಂದ ತನ್ನ ಹರಿವನ್ನು ಸ್ಥಗಿತಗೊಳಿಸಿದೆ. ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದ ಬೈಚನಹಳ್ಳಿ ಪಂಪ್ಹೌಸ್ ಬಳಿ ನದಿಯಲ್ಲಿ ಕಲ್ಲು ಬಂಡೆಗಳು ಮಾತ್ರ ಗೋಚರಿಸುತ್ತಿದ್ದು ನೀರಿನ ಅಭಾವ ಎದ್ದು ಕಾಣುತ್ತಿದೆ.
ಜಲಮಂಡಳಿ ಮೂಲಕ ಎರಡು ದಿನಗಳಿಗೊಮ್ಮೆ ಪಟ್ಟಣದ ಬಡಾವಣೆಗಳಿಗೆ ಸರಬರಾಜಾಗುತ್ತಿದ್ದ ನೀರು ಸ್ಥಗಿತಗೊಂಡಿದ್ದು ಎಲ್ಲೆಡೆ ನಿವಾಸಿಗಳು ಕೊಳವೆ ಬಾವಿಯನ್ನು ಅವಲಂಭಿಸಲು ಪ್ರಾರಂಭಿಸಿದ್ದು ಅಂತರ್ಜಲ ಕುಸಿತದ ಕಾರಣ ಅಗತ್ಯ ಪ್ರಮಾಣದ ನೀರು ಕೂಡ ಲಭ್ಯವಾಗುತ್ತಿಲ್ಲ. ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳು ತಮ್ಮ ವಾರ್ಡ್ಗಳಲ್ಲಿ ಕುಡಿಯುವ ನೀರು ಒದಗಿಸಲು ಟ್ಯಾಂಕರ್ಗಳನ್ನು ಬಳಸುತ್ತಿರುವ ದೃಶ್ಯ ಗೋಚರಿಸಿದೆ. ಜಲಮಂಡಳಿ ಮೂಲಕ ಕೂಡ ಎರಡು ಟ್ಯಾಂಕರ್ಗಳನ್ನು ಬಳಸಿ ಬಡಾವಣೆಗಳಿಗೆ ನೀರು ಒದಗಿಸಲಾಗುತ್ತಿದೆ ಎಂದು ನೀರು ಸರಬರಾಜು ಮಂಡಳಿ ಅಭಿಯಂತರ ಆನಂದ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಬವಣೆ ಪಡಬೇಕಾದ ಸ್ಥಿತಿ ಎದುರಾಗುವ ಆತಂಕ ಮನೆ ಮಾಡಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಪ್ರಥಮ ಆದ್ಯತೆ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ಕುಮಾರ್, ನೀರನ್ನು ಪೋಲು ಮಾಡದಂತೆ ನಾಗರಿಕರು ಎಚ್ಚರವಹಿಸಬೇಕೆಂದು ಸಲಹೆ ಮಾಡಿದ್ದಾರೆ.