ಮಡಿಕೇರಿ, ಮಾ. 21: ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಬರೆದ ಚೊಚ್ಚಲ ಕೃತಿ ‘ಪ್ರಕೃತಿ ಮುನಿದ ಹಾದಿಯಲ್ಲಿ...’ ಪುಸ್ತಕ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ತಾ. 26 ರಂದು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಕೊಡಗು ಪ್ರೆಸ್ ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಆಶ್ರಯದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ. ಟಿ.ಡಿ. ತಿಮ್ಮಯ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನು ಪ್ರಕೃತಿ ವಿಕೋಪದ ಸಂದರ್ಭ ಅಪಾಯಕ್ಕೆ ಸಿಲುಕಿ ರಕ್ಷಣೆಗೊಳಗಾದ ಹೆಮ್ಮೆತಾಳುವಿನ ಚಂದುಗೋಪಾಲ್-ಹೊನ್ನಮ್ಮ ದಂಪತಿ ನೆರವೇರಿಸಲಿದ್ದು, ಎಸ್ಪಿ ಸುಮನ್ ಡಿ. ಪನ್ನೇಕರ್ ಹಾಗೂ ಐಎಎಸ್ ಅಧಿಕಾರಿ ಪಿ.ಐ. ಶ್ರೀವಿದ್ಯಾ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿ ಅಂತರರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಪಾಲ್ಗೊಳ್ಳಲಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಎಫ್‍ಎಂಸಿ ಕಾಲೇಜು ಉಪನ್ಯಾಸಕಿ ಹಾಗೂ ಲೇಖಕಿ ಡಾ. ನಯನಾ ಕಶ್ಯಪ್, ಟ್ರಾವೆಲ್ ಕೂರ್ಗ್ ಸಂಸ್ಥೆ ಮುಖ್ಯಸ್ಥ ಚೆಯ್ಯಂಡ ಸತ್ಯ ಗಣಪತಿ, ಕೃತಿಯ ಲೇಖಕ, ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಉಪಸ್ಥಿತರುವರು. 11.30ಕ್ಕೆ ತೀತಮಾಡ ಅರ್ಜುನ್ ದೇವಯ್ಯ ಅವರಿಂದ ‘ವ್ಯಕ್ತಿತ್ವ ವಿಕಸನ’À ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಬಿಡುಗಡೆಯ ಪ್ರಯುಕ್ತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭ ಪ್ರಶಸ್ತಿ ವಿತರಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.