ಮಡಿಕೇರಿ, ಮಾ. 21: ಶಿಕ್ಷಕರ ಕಠಿಣ ಪರಿಶ್ರಮದಿಂದಲೇ ವಿದ್ಯಾರ್ಥಿಗಳ ಯಶಸ್ಸು ಸಾಧ್ಯ ಎಂದು ಜಿಲ್ಲಾ ಜೌಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ 2017-18ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಲು ಕಾರಣಕರ್ತರಾದ ಶಿಕ್ಷಕರಿಗೆ ಏರ್ಪಡಿಸಲಾದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಹೆಚ್ಚಿನ ಮಂದಿ ಬಡ ವಿದ್ಯಾರ್ಥಿಗಳೇ ಆಗಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣಕರ್ತರಾದ ಶಿಕ್ಷಕರನ್ನು ಸುಮಾರು 8 ವರ್ಷಗಳಿಂದ ಗುರುತಿಸಿ ಗೌರವಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಶಿಕ್ಷಕರನ್ನು ಸನ್ಮಾನಿಸಲಾಗುವದು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಪಿ.ಎಸ್. ಕಾಮಾಕ್ಷಿ ಅವರು, ಪ್ರತಿವರ್ಷದಂತೆ ಈ ಬಾರಿಯೂ ದಲಿತ ಸಂಘರ್ಷ ಸಮಿತಿ ನಮ್ಮನ್ನು ಗುರುತಿಸಿ ಸನ್ಮಾನಿಸಿದೆ, ಈ ಸನ್ಮಾನ ಶಿಕ್ಷಕರ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಮುಂಬರುವ ದಿನಗಳಲ್ಲಿ ಇದೇ ಫಲಿತಾಂಶವನ್ನು ನೀಡಲು ಪ್ರಯತ್ನಿಸಲಾಗುವದು ಎಂದರು. ಸಭಾ ಕಾರ್ಯಕ್ರಮದ ಗಣ್ಯರು 11 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಎಸ್‍ಡಿಎಂಸಿ ಶಿಕ್ಷಣ ತಜ್ಞ ಹೊಸೂರು ಗೋಪಾಲಕೃಷ್ಣ, ಅಧ್ಯಕ್ಷ ಪಿ.ಜಿ. ತೇಜೇಶ್ವರ, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಂ.ಪಿ. ದೀಪಕ್, ಶಿಕ್ಷಕರಾದ ಕೆ. ಜ್ಯೋತಿ ಶೆಟ್ಟಿ, ಡಾ. ಬಿ.ಎಸ್. ಯೋಗೀಶ್, ನಂದಾ ಪೋಳ್, ಸಹಾಯಕರಾದ ಪಿ.ಎಸ್. ತಿಲಕ, ಕೆ.ಎಂ. ಕಮಲ ಉಪಸ್ಥಿತರಿದ್ದರು.

ಶಿಕ್ಷಕರುಗಳಾದ ಡಿ. ಸರಿತ ನಿರೂಪಿಸಿ, ದೇಚಮ್ಮ ಸ್ವಾಗತಿಸಿ, ವಿ. ಮಮತ ವಂದಿಸಿದರು.