ವೀರಾಜಪೇಟೆ, ಮಾ. 21: ವಿದ್ಯಾರ್ಥಿಗಳ ಭವಿಷ್ಯದಲ್ಲಿ ಯಾವದೇ ಯೋಜನೆ ಮುಂದಿದ್ದರೂ ಅದಕ್ಕೆ ನಿರ್ಧಿಷ್ಟ ಗುರಿ ಇದ್ದರೆ ಸಾಧನೆಗೆ ಅವಕಾಶವಾಗಲಿದೆ. ನಿರ್ಧಿಷ್ಟ ಗುರಿ ಇಲ್ಲದೆ ನೀವು ಯಾವದೇ ಉದ್ಯೋಗ, ವ್ಯಾಪಾರ ವಹಿವಾಟು ಮಾಡಿ ಯ&divlusmn;ಸ್ಸು ಗಳಿಸಲು ಸಾಧ್ಯವಿಲ್ಲ. ವೃತ್ತಿಪರತೆಯಲ್ಲಿ ಹಣ ಹೂಡಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಮುಂದೆ ಭವಿಷ್ಯದ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಇಲ್ಲಿನ ಉದ್ಯಮಿ ಅತೀಫ್ ಮನ್ನಾ ಹೇಳಿದರು.

ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ಘಟಕ ಮತ್ತು ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಕಾಲೇಜಿನಲ್ಲಿ ವಸ್ತು ಪ್ರದರ್ಶನ, ಮಾರಾಟ ಎಕ್ಸ್‍ಪೋ 19 ನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಈ ಕಾರ್ಯಕ್ರಮ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದರು.

ಪ್ರಾಂಶುಪಾಲ ಡಾ ಟಿ.ಕೆ. ಬೋಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಆರಂಭಿಸಿದ ಅನೇಕ ವರ್ಷಗಳ ಬಳಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ತಾವೇ ತಯಾರಿಸಿದ ತಿಂಡಿ ತಿನಿಸುಗಳನ್ನು ತಂದು ಮಾರಾಟ ಮಾಡುತ್ತಿರುವದು ವಿಭಿನ್ನವಾಗಿದೆ. ವಿದ್ಯಾರ್ಥಿಗಳ ಈ ರೀತಿಯ ಕಾರ್ಯಕ್ರಮಗಳಿಂದ ಶಿಕ್ಷಣದೊಂದಿಗೆ ಜ್ಞಾನವನ್ನು ಸಂಪಾದಿಸಬಹುದು. ಹಿಂದೆ ಸಣ್ಣ ಕೈಗಾರಿಕೆಗೆ ಹಾಗೂ ಗುಡಿ ಕೈಗಾರಿಕೆಗೆ ಒತ್ತು ನೀಡಲಾಗಿತ್ತು. ನಂತರ ಬದಲಾವಣೆ ಕಂಡು ದೊಡ್ಡ ಕೈಗಾರಿಕೆಗಳು ಬಂದವು. ಈಗ ಮತ್ತೆ ಸಣ್ಣ ಕೈಗಾರಿಕೆಗಳು ಮಹತ್ವವನ್ನು ಪಡೆದುಕೊಂಡಿದೆ. ಈಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಣ್ಣ ಬಂಡವಾಳ ಹಾಕಿ ದೊಡ್ಡ ಪ್ರತಿಫಲ ಪಡೆಯುವ ನಿರೀಕ್ಷೆ ಮಾಡಬೇಕು. ಜೊತೆಗೆ ಆಧುನಿಕತೆಯನ್ನು ಬಳಸಿಕೊಳ್ಳಿ ಎಂದರು.

ಈ ಸಂದರ್ಭ ಕಾರ್ಮಸ್ ವಿಭಾಗದ ಅಧ್ಯಕ್ಷ ಹೆಚ್.ಬಿ. ಕಾರ್ತಿಕ್ ಕುಮಾರ್ ಹಾಗೂ ಕಾಮರ್ಸ್ ವಿಭಾಗದ ಸಹಾಯಕ ಪ್ರೊ. ಎಂ.ಎಂ. ಸುನಿತಾ ಉಪಸ್ಥಿತರಿದ್ದರು.