ಸೋಮವಾರಪೇಟೆ, ಮಾ. 21: ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರೋತ್ಸವ ಅದ್ಧೂರಿ ಆಚರಣೆಯ ಮೂಲಕ ತೆರೆ ಕಂಡಿತು.

ದೇವಾಲಯದಲ್ಲಿ ಪಯಂಗುತ್ತಿ ಸೇವೆ, ದೈವಗಳ ವೆಳ್ಳಾಟಂ, ವಿವಿಧ ಕೋಲಗಳು ನಡೆದವು. ಸೋಮವಾರ ಸಂಜೆ ದೇವಾಲಯದಿಂದ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮುತ್ತಪ್ಪ ದೈವದ ಮೊದಲ್ ಕಲಶದ ಮೆರವಣಿಗೆ ನಡೆಯಿತು. ಕೇರಳದ ಸಿಂಗಾರಿ ಮೇಳ ದೊಂದಿಗೆ ನಡೆದ ಮೆರವಣಿಗೆ ಆಕರ್ಷಣೀಯವಾಗಿತ್ತು. ದೇವಾಲಯದ ವಿವಿಧ ಗುಡಿಗಳಲ್ಲಿ ಪ್ರತಿಷ್ಠಾಪಿಸಿರುವ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಕರಿಂಗುಟ್ಟಿ ಶಾಸ್ತವು, ಕಂಡಕರ್ಣ ದೈವ, ಭಗವತಿ ದೇವಿ, ರಕ್ತಚಾಮುಂಡಿ, ಪೊಟ್ಟನ್ ದೈವದ ವೆಳ್ಳಾಟಂ ಹಾಗೂ ಕೋಲಗಳು ನಡೆದವು. ಮಧ್ಯರಾತ್ರಿ ದೇವರ ಕಳಿಕ್ಕಾಪಾಟ್ ನಡೆಯಿತು. ಜಾತ್ರೋತ್ಸ ವದ ಅಂಗವಾಗಿ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಸಿಡಿಮದ್ದಿನ ಪ್ರದರ್ಶನ ಜಾತ್ರೋತ್ಸವದ ಆಕರ್ಷಣೀ ಯವಾಗಿತ್ತು. ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು. ಮಂಗಳವಾರ ಬೆಳಗ್ಗಿನ ಜಾವ ಪೊಟ್ಟನ್ ದೈವ ಅಗ್ನಿಕೊಂಡ ಕ್ಕೇರುವ ದೃಶ್ಯ ಸ್ಥಳದಲ್ಲಿದ್ದ ಭಕ್ತರನ್ನು ಮೈನವಿರೇಳಿಸಿತು. ವಿಷ್ಣುಮೂರ್ತಿ, ಕಂಡಕರ್ಣ, ಗುಳಿಗನ್ ದೈವಕ್ಕೆ ಗುರುಶ್ರೀ ದರ್ಪಣ ನಡೆಯುವದರೊಂದಿಗೆ ಜಾತ್ರೋತ್ಸವ ಮುಕ್ತಾಯಗೊಂಡಿತು. ಜಾತ್ರೋತ್ಸವದ ಯಶಸ್ವಿಗಾಗಿ ಅಧ್ಯಕ್ಷ ಎನ್.ಡಿ. ವಿನೋದ್, ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ನೇತೃತ್ವದಲ್ಲಿ ದೇವಾಲಯ ಸಮಿತಿಯ ಕಾರ್ಯಕರ್ತರು ಶ್ರಮಿಸಿದರು.