*ಸಿದ್ದಾಪುರ, ಮಾ. 21: ಸಿದ್ದಾಪುರ, ನೆಲ್ಲಿಹುದಿಕೇರಿ ಮತ್ತು ಅಭ್ಯತ್ಮಂಗಲದ ಸುತ್ತ ಪ್ರದೇಶಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ.
ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿಯಲ್ಲಿ ಒಂದು ಇಂಚು ಮಳೆಯಾದರೆ, ಅಭ್ಯತ್ಮಂಗಲ ವ್ಯಾಪ್ತಿಯಲ್ಲಿ 1.5 ಇಂಚು ಮಳೆಯಾಗಿದೆ. ಇತ್ತ ಕೊಂಡಂಗೇರಿ, ಗುಹ್ಯ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಇಲ್ಲಿನ ಸುತ್ತಮುತ್ತಲ ಪ್ರದೇಶಗಳು ಬಿಸಿಲ ಧಗೆಯಿಂದ ಕಂಗಾಲಾಗಿದ್ದು, ಅನಿರೀಕ್ಷಿತ ಮಳೆಯಿಂದ ತಂಪು ವಾತಾವರಣ ಕಂಡು ಬಂದಿದೆ. ಒಣಗುತ್ತಿರುವ ಕಾಫಿ ತೋಟಗಳಿಗೆ ನೀರು ಹಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದ ರೈತರು ಮಳೆಯಿಂದ ಸಂತಸಗೊಂಡಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ 4.30 ರಿಂದ 5 ಗಂಟೆವರೆಗೆ ಗುಡುಗು ಸಹಿತ ಬಿರುಸಿನ ಮಳೆ ಸುರಿದ ಕಾರಣ ಕೃಷಿಕರ ಮನದಲ್ಲಿ ಸಂತಸ ತಂದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತವರಣವಿದ್ದು, ಸಂಜೆ ಗ್ರಾಮೀಣ ಭಾಗದ ಕೆದಮುಳ್ಳೂರು, ತೋರ, ಕೊಟ್ಟೋಳಿ, ಪಾಲಾಂಗಾಲ, ಅಮ್ಮತ್ತಿ, ಇತರೆಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಅನೇಕ ದಿನಗಳಿಂದ ಉರಿಬಿಸಿಲು ಶಾಖದಿಂದ ಇದ್ದ ಜನತೆಗೆ ಖುಷಿತಂದಿದೆ. 2019 ರಲ್ಲಿ ಇದು ಮೊದಲ ಮಳೆಯಾಗಿದೆ.