ಮಡಿಕೇರಿ, ಮಾ. 21: ಭಾಗಮಂಡಲ ಹೋಬಳಿಯ ಕುಂದಚೇರಿ ಗ್ರಾ.ಪಂ. ವ್ಯಾಪ್ತಿಯ ಬಾಳೆತೋಟ ಎಂಬಲ್ಲಿನ ಸರ್ವೆ ನಂ. 1/10 ರಲ್ಲಿ 204.42 ಎಕರೆ ಜಾಗವನ್ನು ಮಾಜಿ ಕೇಂದ್ರ ರೈಲ್ವೆ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಪತ್ನಿ ಎಂ. ನಾಗರತ್ನಮ್ಮ ಎಂಬವರು, ತನ್ನ ಸೊಸೆ ಶೃತಿಶ್ರೀ ಎಂಬಾಕೆಗೆ ತರಾತುರಿಯಲ್ಲಿ ದಾನ ನೀಡಿರುವ ಸಂಗತಿ ಬಹಿರಂಗಗೊಂಡಿದೆ.2016ರ ಏಪ್ರಿಲ್ 8 ರಂದು ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ ಕುಂದಚೇರಿ ಗ್ರಾಮದ ಚೆಟ್ಟಿಮಲೆ (ಬಾಳೆತೋಟ) ಎಂಬಲ್ಲಿನ 204.42 ಎಕರೆ ಏಲಕ್ಕಿ ತೋಟವನ್ನು ಕೆ.ಹೆಚ್. ಮುನಿಯಪ್ಪ ತಮ್ಮ ಪತ್ನಿ ಎಂ. ನಾಗರತ್ನಮ್ಮ ಎಂಬವರ ಹೆಸರಿನಲ್ಲಿ ನೋಂದಾಯಿಸುವದ ರೊಂದಿಗೆ ಬೆಂಗಳೂರಿನ ಸಂಜಯ ನಗರದಲ್ಲಿರುವ ತಮ್ಮ ಸ್ವಂತ ಮನೆ ವಿಳಾಸದೊಂದಿಗೆ ಖರೀದಿಸಿದ್ದು, ಬೆಳಕಿಗೆ ಬಂದಿದೆ.
ಈಚೆಗೆ ಮುನಿಯಪ್ಪ ಅವರು ಕೋಲಾರ ಸುತ್ತಮುತ್ತ 400 ಎಕರೆಗೂ ಅಧಿಕ ಅಕ್ರಮ ಆಸ್ತಿ ಹೊಂದಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಈ ಸಂದರ್ಭ ಕೊಡಗಿನಲ್ಲಿ ಕೂಡ ಅವರು ಬೇನಾಮಿ ಹೆಸರಿನಲ್ಲಿ ಅಕ್ರಮ ಆಸ್ತಿ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಇದೇ ವಿಷಯವಾಗಿ ಕೋಲಾರ ದವರೇ ಆಗಿರುವ ಬಿಜೆಪಿ ರಾಜ್ಯ ಪರಿಶಿಷ್ಟ ಮೋರ್ಚಾ ಅಧ್ಯಕ್ಷ ಎಂ. ಮುನಿಯಪ್ಪ ಈ ಬಗ್ಗೆ ದಾಖಲೆಗಳ ಸಹಿತ ಆರೋಪ ಹೊರಗೆಡವಿದ್ದರು.
ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಾಜಿ ಸಚಿವರು, ತರಾತುರಿಯಲ್ಲಿ ತಾ. 19 ರಂದು ಮಡಿಕೇರಿಯ ಉಪ ನೋಂದಾಣಿ ಕಚೇರಿಯಲ್ಲಿ ತಮ್ಮ ಪತ್ನಿ ಹೆಸರಿನಲ್ಲಿರುವ ಕುಂದಚೇರಿಯ ಜಾಗವನ್ನು (ಮೊದಲ ಪುಟದಿಂದ) ಸೊಸೆ ಶೃತಿಶ್ರೀ ಹೆಸರಿನಲ್ಲಿ ದಾನಪತ್ರ ನೀಡಿರುವದು ಇಲಾಖೆಯ ದಾಖಲೆಗಳಿಂದ ಬಹಿರಂಗವಾಗಿದೆ. ಅಲ್ಲದೆ ನೊಂದಾಣಿ ಶುಲ್ಕ
ರೂ. ಒಂದು ಸಾವಿರದೊಂದಿಗೆ ಇತರ ಖರ್ಚು ರೂ. 885 ಮೊತ್ತ ಸಹಿತ ರೂ. 1885 ಪಾವತಿಸಿ ನಾಗರತ್ನಮ್ಮ ಹೆಸರಿನ ಆಸ್ತಿಯನ್ನು ಶೃತಿಶ್ರೀ ಹೆಸರಿಗೆ ದಾನ ನೀಡಿರುವದು ದೃಢಪಟ್ಟಿದೆ. ಈ ಸಂಬಂಧ ಕೋಲಾರದವರೇ ಆಗಿರುವ ಮಾಜಿ ಸಚಿವರ ವಿರೋಧಿ ಪಾಳಯದ ಎಂ. ಮುನಿಯಪ್ಪ ಸಮಗ್ರ ತನಿಖೆಗೂ ಆಗ್ರಹಿಸಿದ್ದಾರೆ.
ವಿಶೇಷವೆಂದರೆ ಮಾಜಿ ಸಚಿವರ ಪತ್ನಿ ತಮ್ಮ ಸೊಸೆಗೆ ನೀಡಿರುವ ದಾನಪತ್ರದಂತೆ ಸಂಬಂಧಿಸಿದ 204.42 ಎಕರೆ ಜಾಗಕ್ಕೆ; ಶೃತಿಶ್ರೀ ತಂದೆ ಹೆಚ್.ಎಸ್. ಲೋಕೇಶ್ ಎಂಬವರಿಗೆ ಇದರ ಅಧಿಕಾರ ಹಕ್ಕು ನೀಡಲಾಗಿದೆ. ಮಾತ್ರವಲ್ಲದೆ ಕಾನೂನು ತಜ್ಞರ ಮೂಲಕ ನಾಗರತ್ನಮ್ಮ ಬರೆದಿರುವ ಅಧಿಕಾರದ ಪತ್ರದ ಹಕ್ಕನ್ನು ಲೋಕೇಶ್ ಹೊಂದಿಕೊಂಡಿರು ವದಾಗಿ ದಾಖಲಾತಿಗಳಲ್ಲಿ ನಮೂದಿಸಲಾಗಿದೆ. ಎಲ್ಲರ ವಿಳಾಸ ಮಾತ್ರ ಮಾಜಿ ಕೇಂದ್ರ ಸಚಿವರ ಸಂಜಯನಗರ ನಿವಾಸವೆಂದು ನಮೂದಾಗಿದೆ. ಪರಿಣಾಮ ಕೋಲಾರ ಹಾಗೂ ಬೆಂಗಳೂರು ಹೊರ ವಲಯದಲ್ಲಿ ನೂರಾರು ಎಕರೆ ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಗುರಿಯಾಗಿರುವ ಕೇಂದ್ರದ ಮಾಜಿ ಸಚಿವರು ಕೊಡಗಿನಲ್ಲಿಯೂ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.