ಕುಶಾಲನಗರ, ಮಾ. 22: ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯ ಎರಡು ಸ್ಥಳಗಳಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ಮಾಡಿ ಹಲವರನ್ನು ವಶಕ್ಕೆ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನಗಳನ್ನು ಹಾಗೂ ಜೂಜಿಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಠಾಣಾಧಿಕಾರಿ ನಂದೀಶ್ ಮತ್ತು ಕಾರ್ಯಾಚರಣೆ ತಂಡ ಕೂಡಿಗೆ ಮತ್ತು ಗುಡ್ಡೆಹೊಸೂರು ಬಳಿ ಅಕ್ರಮ ಜೂಜಾಟ ನಡೆಸುತ್ತಿದ್ದ ವೇಳೆಗೆ ದಾಳಿ ಮಾಡಿದ್ದಾರೆ, ಕೂಡಿಗೆಯಲ್ಲಿ ಸೈನಿಕ ಶಾಲೆ ಹಿಂಭಾಗ ದಾಳಿ ಮಾಡಿದ ಸಂದರ್ಭ ಆರೋಪಿಗಳಾದ ಕೆ.ಪಿ.ಕಿರಣ್, ಎಚ್.ಕೆ.ರಘು, ಜೆ.ಕಿರಣ್, ಪ್ರಶಾಂತ್, ಬೋಪಯ್ಯ, ಮುರಳಿ, ಲೋಕೇಶ್, ಅರಸು ಎಂಬವರನ್ನು ವಶಕ್ಕೆ ಪಡೆದಿದ್ದು ಎರಡು ಆಟೋ ರಿಕ್ಷಾ, ಒಂದು ಬೈಕ್, ಮೂರು ಮೊಬೈಲ್ ಮತ್ತು ಅಲ್ಪ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ಗುಡ್ಡೆಹೊಸೂರು ಪೆಟ್ರೋಲ್ ಬಂಕ್ ಮುಂಭಾಗ ಕಾವೇರಿ ಹೊಳೆ ಬದಿಯಲ್ಲಿ ಜೂಜಾಡುತ್ತಿದ್ದ ಗಣೇಶ, ಸತೀಶ, ರಹಮತುಲ್ಲಾ, ಅನಿ, ರವಿ, ಆಶಿಕ್, ಹರ್ಷ ಎಂಬವರುಗಳನ್ನು ವಶಕ್ಕೆ ಪಡೆದಿದ್ದು ಸ್ಥಳದಲ್ಲಿದ್ದ ರು 1820, ಒಂದು ಆಟೋ ರಿಕ್ಷಾ, ಸ್ವಿಫ್ಟ್ ಕಾರು ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಪ್ರಭಾರ ಠಾಣಾಧಿಕಾರಿ ಅರ್ಚನಾ, ಸ್ಥಳೀಯ ಅಪರಾಧ ಪತ್ತೆ ಕಾರ್ಯಾಚರಣೆ ತಂಡದ ಬಿ.ಎಸ್.ದಯಾನಂದ, ಸಜಿ, ಎ.ಎಸ್.ಜೋಸೆಫ್, ಪ್ರಕಾಶ್, ಸುರೇಶ್, ಪ್ರವೀಣ್, ಮಂಜು, ಉದಯ, ನಾಗರಾಜ್ ಪಾಲ್ಗೊಂಡಿದ್ದರು.
ಕುಶಾಲನಗರ ವ್ಯಾಪ್ತಿಯಲ್ಲಿ ಗುಡ್ಡೆಹೊಸೂರಿನಿಂದ ಶಿರಂಗಾಲ ತನಕ ನದಿ ತಟದಲ್ಲಿ ಅಕ್ರಮ ಜೂಜಾಟ ನಡೆಸುತ್ತಿರುವ ಮಾಹಿತಿ ಸ್ಥಳೀಯರಿಂದ ದೊರೆತಿದ್ದು ಈ ನಿಟ್ಟಿನಲ್ಲಿ ದಿನದ 24 ಗಂಟೆ ದಾಳಿ ನಡೆಸಲು ತಂಡ ರಚಿಸಲಾಗಿದೆ ಎಂದು ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ ತಿಳಿಸಿದ್ದಾರೆ. ದಾಳಿ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿ ಗಡಿಭಾಗವಾದ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ತಲೆತಪ್ಪಿಸಿಕೊಳ್ಳುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಅಕ್ರಮ ಇಸ್ಪೀಟ್ ಅಡ್ಡೆಗಳನ್ನು ಮಟ್ಟ ಹಾಕಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ದಿನಕರ ಶೆಟ್ಟಿ ತಿಳಿಸಿದ್ದಾರೆ. ಯಾವದೇ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೆ ಸಂಬಂಧಿಸಿದ ಠಾಣೆಗಳಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.