ಸಿದ್ದಾಪುರ, ಮಾ. 22: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಿದ್ದು, ತನ್ನನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಕರೆ ನೀಡಿದರು.
ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸದನಾಗಿರುವ ಸಂದರ್ಭದಲ್ಲಿ ಜಿಲ್ಲೆಗೆ ರೈಲು ಯೋಜನೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವದಾಗಿ ತಿಳಿಸಿದರು. ದೇಶದ ಹಿತ ಚಿಂತನೆಯಿಂದಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೊಡಗಿನ ಮತದಾರರು ಬಿ.ಜೆ.ಪಿ.ಗೆ ಮತ ಹಾಕುವಂತೆ ಕೋರಿದರು. ಯುವ ಪೀಳಿಗೆಯ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವದಾಗಿ ತಿಳಿಸಿದರು.
ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿದರು. ಈ ಸಂದರ್ಭ ಬಿಜೆಪಿ ಪಕ್ಷದ ಜಿಲ್ಲಾ ಮಖಂಡರಾದ ಕಾಂತಿ ಸತೀಶ್, ರಘು ನಾಣಯ್ಯ, ತಳೂರು ಕಿಶೋರ್ ಕುಮಾರ್, ತಾ.ಪಂ. ಸದಸ್ಯ ಕೆ.ಎಂ. ಜನೀಸ್, ಸಿದ್ದಾಪುರ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಡಿ. ನಾಣಯ್ಯ, ಬಿ.ಕೆ. ಅನಿಲ್ ಶೆಟ್ಟಿ, ಸುವಿನ್ ಗಣಪತಿ, ಹರಿದಾಸ್ ಇನ್ನಿತರರು ಹಾಜರಿದ್ದರು. ನೆಲ್ಲಿಕಲ್ಲ್ ಸುರೇಶ್ ಸ್ವಾಗತಿಸಿ, ವಂದಿಸಿದರು.