ಗೋಣಿಕೊಪ್ಪ ವರದಿ, ಮಾ. 21 : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ಗೆಲವಿಗೆ ಒಂದಾಗಿ ಶ್ರಮಿಸಲು ಕಾರ್ಯಕರ್ತರನ್ನು ಒಗ್ಗೂಡಿಸಲಾಗು ತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಎಂ. ಗಣೇಶ್ ಹೇಳಿದರು.
ಪಕ್ಷದಲ್ಲಿ ಯಾವ ಗೊಂದಲಗಳು ಉಳಿದಿಲ್ಲ. ಎಲ್ಲಾ ಕಡೆಗಳಲ್ಲೂ ಅಸಮದಾನದಿಂದ ತಟಸ್ಥವಾಗಿ ದೂರ ಉಳಿದಿದ್ದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರುಗಳನ್ನು ಒಂದುಗೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲಾರೂ ಒಂದಾಗಿ ಮೈತ್ರಿ ಅಭ್ಯರ್ಥಿಯ ಗೆಲವಿಗೆ ಶ್ರಮಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ವರ್ಷಗಳ ತಾಲೂಕು ರಚನೆ ಹೋರಾಟಕ್ಕೆ ನಮ್ಮ ಮುಖ್ಯಮಂತ್ರಿ ಸ್ಪಂದಿಸುವ ಮೂಲಕ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕು ರಚನೆ ಘೋಷಣೆಯಾಗಿದೆ. ಇದು ಕೂಡ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.
ಮುಖಂಡ ಎಂ. ಟಿ. ಕಾರ್ಯಪ್ಪ ಮಾತನಾಡಿ, ಕಾಳುಮೆಣಸು ಬೆಲೆ ಕುಸಿತಕ್ಕೆ ಸಂಸದ ಪ್ರತಪ್ ಸಿಂಹ ಅವರೇ ನೇರ ಹೊಣೆ. ಹಲವು ವರ್ಷಗಳಿಂದ ಸಂಬಾರ ಮಂಡಳಿ ಸದಸ್ಯರಾಗಿದ್ದರೂ ಕೂಡ ಕಾಳುಮೆಣಸು ಆಮದು ತಡೆಹಿಡಿಯಲು ಅವರಿಂದ ಆಗಲಿಲ್ಲ. ಇದರಿಂದ ಸ್ಥಳೀಯ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ದಯಾ ಚೆಂಗಪ್ಪ ಮಾತನಾಡಿ, ಹೈಕಮಾಂಡ್ ಸೂಚನೆಯಂತೆ ಮೈತ್ರಿ ಅಭ್ಯರ್ಥಿಗೆ ನಾವು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವ ಗೊಂದಲವಿಲ್ಲವೆಂದರು.
ಹಿರಿಯ ಮುಖಂಡ ಮನೆಯಪಂಡ ಬೆಳ್ಯಪ್ಪ ಮಾತನಾಡಿ, ಈಗಿನ ಸಂಸದರು ಜನರತ್ತ ಬರುವದೇ ಇಲ್ಲ. ಅವರನ್ನು ಕಾಣಲು ಮೈಸೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಲ್ಲೇಂಗಡ ವಿನೀಶ್ ಉಪಸ್ಥಿತರಿದ್ದರು.