ಸಿದ್ದಾಪುರ, ಮಾ. 20: ಉರಿಬಿಸಿಲಿನ ಬೇಗೆಗೆ ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಸಿದ್ದಾಪುರದ ಕಾವೇರಿ ನದಿಯಲ್ಲಿ ಇದೀಗ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದ್ದು, ಮಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡು ಬಂದಿದೆ. ಈ ಬಾರಿಯ ಮಹಾಮಳೆಗೆ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ಹಾನಿಯಾಗಿದ್ದವು. ಅಲ್ಲದೇ ನದಿದಡದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಆದರೆ ಇದೀಗ ಬೇಸಿಗೆ ಆರಂಭವಾಗಿದ್ದು, ಸುಡುಬಿಸಿಲಿನ ತಾಪಕ್ಕೆ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿ ಬಂಡೆಕಲ್ಲುಗಳು ಹಾಗೂ ಮರಳುಗಳ ರಾಶಿಗಳು ಎದ್ದು ಕಾಣುತ್ತಿವೆ. ಕಾವೇರಿ ನದಿಯ ನೀರನ್ನು ಅವಲಂಬಿಸಿಕೊಂಡಿರುವ ನದಿದಡದ ನಿವಾಸಿಗಳಿಗೆ ಇದೀಗ ಶುದ್ಧ ನೀರನ್ನು ಬಳಸಲು ಸಮಸ್ಯೆಯು ಎದುರಾಗಿದೆ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಕಾವೇರಿ ನದಿಯಲ್ಲಿ ನೀರಿನಲ್ಲಿ ಹರಿವಿನ ಪ್ರಮಾಣ ಕ್ಷೀಣಿಸುವದರೊಂದಿಗೆ ನದಿಯಲ್ಲಿ ನೀರಿನ ಹರಿವು ಬತ್ತಿ ಹೋಗುತ್ತಿರುವ ದೃಶ್ಯ ಗೋಚರಿಸುತ್ತಿದ್ದು ನದಿ ನೀರು ಕಲುಷಿತಗೊಂಡು ಹರಿಯುತ್ತಿರುವದು ಕಾಣಬಹುದಾಗಿದೆ. ಸಿದ್ದಾಪುರದ ಸುತ್ತಮುತ್ತ ಗ್ರಾಮಗಳಲ್ಲಿ ಇತ್ತೀಚೆಗೆ ಮಳೆ ಸುರಿದರು ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆಯು ಬಾರದ ಹಿನ್ನೆಲೆ ಕಾಫಿ ತೋಟದ ಮಾಲೀಕರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಬಿಸಿಲಿನ ಝಳ ಹೆಚ್ಚಾಗಿದ್ದು ಕಾಫಿ ಗಿಡಗಳು ಒಣಗುವ ಸ್ಥಿತಿಯಲ್ಲಿದೆ. ಹೂ ಬಿಟ್ಟ ಕಾಫಿ ಗಿಡಗಳು ನೀರಿಲ್ಲದೆ ಒಣಗುತ್ತಿದೆ. ಒಂದೆಡೆ ಕಾಫಿ ಹಾಗೂ ಕರಿಮೆಣಸಿಗೆ ಬೆಲೆಯಲ್ಲಿ ಏರಿಳಿತ ಕಂಡು ಬಂದಿದ್ದು ಇನ್ನೊಂದೆಡೆಯಲ್ಲಿ ಬಿಸಿಲಿನ ತಾಪಕ್ಕೆ ಮುಂದಿನ ವರ್ಷ ಕಾಫಿ ಹಾಗೂ ಕರಿಮೆಣಸು ಫಸಲುಗಳು ಕಡಿಮೆ ಯಾಗಬಹುದೆಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಕಾಡು ಪ್ರಾಣಿಗಳ ಪರದಾಟ: ದಿನದಿಂದ ದಿನಕ್ಕೆ ಬಿಸಿಲಿನ ಝಳಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಅರಣ್ಯ ಪ್ರದೇಶದೊಳಗಿನ ಕೆರೆಗಳು ಬತ್ತಿಹೋಗುತ್ತಿದೆ. ಈ ಹಿನ್ನೆಲೆ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ಅಲ್ಲದೇ ಕಾಫಿ ತೋಟಗಳಲ್ಲಿರುವ ಕೆರೆಗಳಿಗೆ ನೀರು ಕುಡಿಯಲು ಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅರಣ್ಯ ಪ್ರದೇಶದೊಳಗೆ ಕಾಡು ಪ್ರಾಣಿಗಳಿಗೆ ಬೇಕಾದಂತಹ ನೀರಿನ ಸೌಲಭ್ಯ ಇಲ್ಲದಿರುವದು ಕಾಡು ಪ್ರಾಣಿಗಳಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ನೀರಿನ್ನು ಅರಿಸಿಕೊಂಡು ವಲಸೆ ಹೋಗುತ್ತಿದೆ. ಅರಣ್ಯ ಪ್ರದೇಶದೊಳಗೆ ಕಾಡು ಪ್ರಾಣಿಗಳಿಗೆ ನೀರಿನ ಸೌಕರ್ಯವನ್ನು ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡುವ ಸಾಧ್ಯತೆ ಇರುವ ಕಾರಣದಿಂದಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗೃತಾ ಕ್ರಮವಾಗಿ ಅರಣ್ಯ ಪ್ರದೇಶದ ಸುತ್ತಲು ಹಗಲಿರುಳು ಗಸ್ತು ತಿರುಗುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಸುಡುವ ಬಿಸಿಲಿನ ತಾಪದಿಂದಾಗಿ ಮುಂಬರುವ ದಿನಗಳಲ್ಲಿ ಮಾನವರಿಗೂ ಹಾಗೂ ಪ್ರಾಣಿ-ಪಕ್ಷಿ ಸಂಕುಲಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವರುಣನ ಕೃಪದಿಂದ ಸಮಸ್ಯೆ ಬಗೆಹರಿಯುವಂತೆ ಸಾರ್ವಜನಿಕರು ದೇವರ ಮೊರೆ ಹೋಗಿದ್ದಾರೆ. - ವಾಸು