ಶ್ರೀವತ್ಸ

ಮಡಿಕೇರಿ, ಮಾ. 20: ಗಾಳಿಬೀಡಿನಿಂದ ಮಡಿಕೇರಿ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಕುಂಡಾಮೇಸ್ತ್ರಿ ಯೋಜನೆಗೆ ಪೈಪ್‍ಲೈನ್ ಅಳವಡಿಕೆಯಿಂದ ಈ ಪೈಪ್‍ಲೈನ್ ಹಾದುಹೋದ ರಸ್ತೆ ಸಂಪೂರ್ಣ ಹಾನಿಗೊಳಗಾದ ರಸ್ತೆಯನ್ನು ದುರಸ್ತಿಪಡಿಸಿ ಸರಿಪಡಿಸುವಲ್ಲಿ ನಗರಸಭೆ ಮತ್ತು ಕೆಯುಡಬ್ಲೂಎಸ್ ದಿವ್ಯ ನಿರ್ಲಕ್ಷ್ಯ ತೋರಿದ್ದನ್ನು ಖಂಡಿಸಿ ಏಪ್ರಿಲ್ 2 ರಂದು ಕುಂಡಾಮೇಸ್ತ್ರಿಯಿಂದ ಮಡಿಕೇರಿ ನಗರಕ್ಕೆ ಸರಬರಾಜಾಗುವ ನೀರನ್ನು ತಡೆಗಟ್ಟಲು ತೀರ್ಮಾನಿಸಿರುವದಾಗಿ ಗಾಳಿಬೀಡು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮಸ್ಥರಾದ ಕೊಂಬಾರನ ಗಣಪತಿ ಮತ್ತು ಸುಭಾಷ್ ಮಾತನಾಡಿ, ತಾ. 27 ಅಥವಾ 28 ರಂದು ನೀರು ತಡೆಗೆ ಸಂಬಂಧಪಟ್ಟಂತೆ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳಲ್ಲದೆ, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಸಹಿತ ಪೂರ್ವಭಾವಿ ಸಭೆಯನ್ನು ನಡೆಸಿ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಕೊಳ್ಳಲಾಗುವದು ಎಂಬ ಮಾಹಿತಿ ನೀಡಿದರು.

ಮಡಿಕೇರಿ ನಗರದ ನಾಗರಿಕರಿಗೆ ಕುಡಿಯುವ ನೀರು ಎರಡನೆ ಜಲ ಮೂಲ ಆಪತ್ಬಾಂಧವದಂತಿರುವ ಕುಂಡಾ ಮೇಸ್ತ್ರಿಯಿಂದ ಸರಬರಾಜು ಮಾಡಲು ಅಳವಡಿಸಿದ ಪೈಪುಲೈನ್ ಹಾದುಹೋದ ರಸ್ತೆ ಸಂಪೂರ್ಣ ಹಾನಿಗೊಳಗಾಗಿ ನಡೆದಾಡಲು ಮತ್ತು ವಾಹನ ಸಂಚರಿಸಲು ಸಾಧ್ಯವಿಲ್ಲದಂತಾಗಿದ್ದರಿಂದ ಸಂಬಂಧಪಟ್ಟವರು ಸ್ಪಂದಿಸದಿರುವ ಕಾರಣ ಅನಿವಾರ್ಯವಾಗಿ ಕುಂಡಾಮೇಸ್ತ್ರಿಯಿಂದ ಮಡಿಕೇರಿಗೆ ಸರಬರಾಜಾಗುವ ನೀರಿಗೆ ತಡೆಯುಂಟು ಮಾಡಲಾಗುವದು ಎಂದು ಗಾಳಿಬೀಡು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ನೂರಾರು ವರ್ಷಗಳಿಂದ ಮಡಿಕೇರಿ ನಗರಕ್ಕೆ ನೀರು ಸರಬರಾಜಾಗುತ್ತಿದ್ದ ಕೂಟುಹೊಳೆ ಜಲ ಸಂಗ್ರಹಾಲಯಲ್ಲಿ ನೀರಿನ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ನಾಗರಿಕರಿಗೆ ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಬವಣೆಯಾಗುವ ಸಂಭವವಿದೆ.

ನಗರಕ್ಕೆ ಕುಡಿಯುವ ಶುದ್ದ ನೀರಿನ ಯೋಜನೆಯನ್ನು ನಗರಸಭೆ ಮತ್ತು ಕೆಯುಡಬ್ಲ್ಯೂಎಸ್ 2013-14ರಲ್ಲಿ ಕುಂಡಾಮೇಸ್ತ್ರಿ ನದಿಯಿಂದ ಪೈಪು ಮೂಲಕ ಸರಬರಾಜು ವ್ಯವಸ್ಥೆ ಕಲ್ಪಿಸಿರುವದು ಸ್ವಾಗತಾರ್ಹ. ಆದರೆ, ಈ ಸಂದರ್ಭದಲ್ಲಿ ಯೋಜನೆಗೆ ಗಾಳಿಬೀಡು ದರ್ಚಿ ಬಕ್ಕದಿಂದ ಕಾಲೂರು 3 ಕಿ.ಮೀ ದೂರದ ಕಟ್ಟೆಕಲ್ಲು ಎಂಬಲ್ಲಿಯ ಕೊಂಬಾರನ ಕುಟುಂಬದವರ ಮನೆಯ ರಸ್ತೆಯಲ್ಲಿ ಪೈಪು ಅಳವಡಿಸುವಾಗ ಹಾನಿಯಾಗಿದ್ದನ್ನು ಸರಿಪಡಿಸದೆ ಇರುವದು ಮತ್ತು ಗಾಳಿಬೀಡು ಜನತೆಗೆ ಕೂಡ ಕುಡಿಯುವ ನೀರು ಸೌಲಭ್ಯ ಕಲ್ಪಿಸದಿರುವದು ಖಂಡನೀಯ ಎಂದು ಆಕ್ಷೇಪಿಸಿದ್ದಾರೆ.

ಕುಡಿಯುವ ಶುದ್ದ ನೀರಿನ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವೆಂದು ಪರಿಗಣಿಸಿದ ಗಾಳಿಬೀಡು ಗ್ರಾಮಸ್ಥರು ಪೂರ್ಣ ಸಹಕಾರ ನೀಡಿರುವದಾಗಿ ತಿಳಿಸಿದ ಅವರು, ಕಳೆದ ನಾಲ್ಕು ವರ್ಷಗಳು ಕಳೆದರೂ ಹಾನಿಗೀಡಾದ ರಸ್ತೆಯ ಸುಮಾರು ಅರ್ಧ ಭಾಗದಷ್ಟಕ್ಕೆ ಡಾಮರೀಕರಣ ಮಾಡಿದ್ದರೂ ಉಳಿದ ಭಾಗ ಅಂದಾಜು 3 ಕಿ.ಮೀ. ರಸ್ತೆಯಲ್ಲಿ ಹಾಕಲಾದ ಪೈಪು ಮೇಲೆ ಮಣ್ಣು ಹಾಕಿ ಮುಚ್ಚಲಿಲ್ಲ ಹಾಗೂ ಈ ಜಾಗದಲ್ಲಿ ಅಗತ್ಯ ಚರಂಡಿ ಮಾಡದೆ ಹಾಗೇ ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅವ್ಯವಸ್ಥೆ ಬಗ್ಗೆ 2016 ರಲ್ಲಿ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಚರ್ಚೆ ನಡೆಸಿ ರಸ್ತೆ ಡಾಮರೀಕರಣ ಮಾಡಿಸಿಕೊಡುವ ಬಗ್ಗೆ ನಿರ್ಣಯ ಕೈಗೊಂಡು ನಗರಸಭೆಗೆ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ, 2017 ರಲ್ಲಿ ಗ್ರಾಮಸ್ಥರು ನಗರಸಭೆಗೆ ಅರ್ಜಿ ಸಲ್ಲಿಸಿ ರಸ್ತೆ ಡಾಮರೀಕರಣಗೊಳಿಸಿ ಕೊಡುವಂತೆ ಮನವಿ ಮಾಡಿದ ಸಂದರ್ಭ ನಗರಸಭೆಯವರು ನಮಗೆ ಸಂಬಂಧವಿಲ್ಲವೆಂದು ಹಾರಿಕೆ ಉತ್ತರ ನೀಡಿದ್ದಾರೆ. 2018 ರ ಆಗಸ್ಟ್‍ನಲ್ಲಿ ಸುರಿದ ಮಹಾಮಳೆಗೆ ರಸ್ತೆಯ ಅರ್ಧಭಾಗ ನೀರಿನಲ್ಲಿ ಕೊಚ್ಚಿ ಹೋಗಿದೆಯಲ್ಲದೆ, ಮರಗಳು, ವಿದ್ಯುತ್ ಕಂಬಗಳು ಕೂಡ ಬಿದ್ದು ಗ್ರಾಮಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲದಾಗಿತ್ತು. ಆದರೂ, ನಗರಸಭೆಯವರು ಸ್ಪಂದಿಸಲಿಲ್ಲ. ಇದರಿಂದ ಗ್ರಾಮಸ್ಥರೇ ತಾತ್ಕಾಲಿಕವಾಗಿ ರಸ್ತೆಯನ್ನು ಸರಿಪಡಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಸ್ತೆಯನ್ನು ಸರಿಪಡಿಸಲು ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗೆ ಮತ್ತು ನಗರಸಭಾ ಆಯುಕ್ತರಿಗೆ ಮನವಿ ಮಾಡಲಾಗಿದೆಯಲ್ಲದೆ, ಕಳೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ನಡಾವಳಿ ಸಿದ್ದಪಡಿಸಿ ಸಂಬಂಧಪಟ್ಟ ಕಚೇರಿಗಳಿಗೆ ರವಾನಿಸಲಾಗಿದ್ದರೂ ನಗರಸಭೆ ಅಥವಾ ಜಲಮಂಡಳಿಯವರಾಗಲೀ ಯಾವದೇ ರೀತಿಯ ಸ್ಪಂದನೆ ನೀಡದಿರುವದರಿಂದ ಕುಂಡಾಮೇಸ್ತ್ರಿಯಿಂದ ನೀರು ಸರಬರಾಜಿಗೆ ತಡೆವೊಡ್ಡುವದಾಗಿ ಎಚ್ಚರಿಸಲಾಗಿದೆ ಎಂದಿದ್ದಾರೆ. ಆದರೂ, ನಗರಸಭೆಯವರು ನಮಗೆ ಸಂಬಂಧವಿಲ್ಲ ಎಂದು ಬಾಲಿಶ ಹೇಳಿಕೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಸಂಬಂಧವಿಲ್ಲ.....!

ಗಾಳಿಬೀಡು ಗ್ರಾಮಸ್ಥರು ಎರಡು ದಿನಗಳ ಹಿಂದೆ ನಗರಸಭಾ ಆಯುಕ್ತ ಎಂ.ಆರ್.ರಮೇಶ್ ಅವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿ ವಿವರ ಬಯಸಿದಾಗ ‘ನೀರು ಸರಬರಾಜು ಯೋಜನೆ ಕೆಯುಡಬ್ಲ್ಯೂಎಸ್‍ಗೆ ಸೇರಿದ್ದರಿಂದ ಮತ್ತು ಯೋಜನೆ ಇನ್ನೂ ಪೂರ್ಣಗೊಳ್ಳದ ಕಾರಣ ನಮಗೆ ಸಂಬಂಧವಿಲ್ಲ ಎಂದು ಪ್ರತಿಕ್ರಿಯೆ ನೀಡಿದರೆಂದು ಮತ್ತು ಯೋಜನೆಗೆ ಸಂಬಂಧಿಸಿದ ಕೆಯುಡಬ್ಲ್ಯೂಎಸ್‍ನ ಅಧಿಕಾರಿಯನ್ನು ಆಯುಕ್ತರು ಆಹ್ವಾನಿಸಿದಾಗ ಅವರು, ಯೋಜನೆ ಪೂರ್ಣಗೊಂಡಿದೆ. ಅಲ್ಲದೆ, ಆ ರಸ್ತೆಗೂ ನಮಗೆ ಸಂಬಂಧವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.