ಗೋಣಿಕೊಪ್ಪ ವರದಿ, ಮಾ. 20; ಪ್ರಾತ್ಯಕ್ಷಿಕೆ ತರಬೇತಿಗೆ ತೆರಳಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಅಲ್ಲಿನ ಅಘನಾಸಿನ ಹೊಳೆಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಕಾಲೇಜಿನಲ್ಲಿ ಅಂತಿಮ ತರಗತಿ ಓದುತ್ತಿದ್ದ ಮೂಲತಃ ದಾವಣಗೆರೆಯ ಹರಪನಹಳ್ಳಿ ನಿವಾಸಿ ಅಭಿಷೇಕ್ (22) ಮೃತ ವಿದ್ಯಾರ್ಥಿ. ಪ್ರಾತ್ಯಕ್ಷಿಕೆ ಶಿಕ್ಷಣಕ್ಕಾಗಿ ಕಾಲೇಜಿನಿಂದ ಮೂರು ತಂಡದ ವಿದ್ಯಾರ್ಥಿಗಳು ತೆರಳಿದ್ದರು. ಈ ಸಂದರ್ಭ ಅಲ್ಲಿನ ಸಮೀಪದಲ್ಲಿದ್ದ ಹೊಳೆಗೆ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ನದಿಯ ಸುಳಿಗೆ ಸಿಲುಕಿದ ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ ಅಭಿಷೇಕ್ ಮೇಲೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.
ಹೊನ್ನಾವರ ವಲಯ ಅರಣ್ಯದ ಡಿಸಿಎಫ್ ವಸಂತ ರೆಡ್ಡಿ ನೇತೃತ್ವದಲ್ಲಿ ಅರಣ್ಯ ಕಾಲೇಜಿನ ಡೀನ್ ಪ್ರೊ ಸಿ.ಜಿ.ಕುಶಾಲಪ್ಪ, ವಿದ್ಯಾರ್ಥಿ ಕೌನ್ಸಿಲರ್ ಡಾ.ಸತೀಶ್ ಕೂಡ ವಿದ್ಯಾರ್ಥಿಗಳೊಂದಿಗೆ ತೆರಳಿದ್ದರು.