ಮಡಿಕೇರಿ, ಮಾ. 19: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೋಪೇಶ್ನನ್ನು ಇಂದು ಬಿಗಿ ಬಂದೋಬಸ್ತ್ನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿ ಸಲಾಯಿತು.
2010ರಲ್ಲಿ ಭಾಗಮಂಡಲ ಸಮೀಪ ಮುಂಡ್ರೋಟು ಹಾಗೂ 2013ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷನಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳದ ವೈವೂರು ಕಾರಾಗೃಹದಲ್ಲಿದ್ದ ರೂಪೇಶ್ನನ್ನು ನಿನ್ನೆ ದಿನ ಕೊಡಗಿಗೆ ಕರೆತಂದಿದ್ದ ಕೇರಳ ಪೊಲೀಸರು ಆತನನ್ನು ಜಿಲ್ಲಾ ಕಾರಗೃಹದಲ್ಲಿರಿಸಿ ಇಂದು ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರೆದುರು ಹಾಜರುಪಡಿಸಿದರು.
ನಂತರ ನ್ಯಾಯಾಧೀಶರೆದುರು ಭಾಗಮಂಡಲ ಮುಂಡ್ರೋಟುವಿನಲ್ಲಿ ಕಾಣಿಸಿಕೊಂಡ ಬಗ್ಗೆ ತನ್ನ ಮೇಲೆ ಪ್ರಕರಣ ದಾಖಲಾದ ದಿನದಂದು ಕೇರಳದಲ್ಲೂ ಕೂಡ ತನ್ನ ವಿರುದ್ಧ ಇದೇ ರೀತಿಯ ಪ್ರಕರಣ ದಾಖಲಾಗಿದೆ. ಮುಂಡ್ರೋಟುವಿನ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಸಿಕ್ಕಿಸಲಾಗಿದೆ, ಆದ್ದರಿಂದ ಮುಂಡ್ರೋಟು ಪ್ರಕರಣದಿಂದ ತನ್ನನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ.
ಮನವಿ ಆಲಿಸಿದ ನ್ಯಾಯಾಧೀಶರು ರೂಪೇಶ್ ಮನವಿ ಸಂಬಂಧ ರೂಪೇಶ್ಗೆ ವಾದ ಮಂಡಿಸಲು ಹಾಗೂ ರೂಪೇಶ್ ಅರ್ಜಿ ಸಂಬಂಧ ಆಕ್ಷೇಪಣೆ ವ್ಯಕ್ತಪಡಿಸಿ ಸರ್ಕಾರಿ ಅಭಿಯೋಜಕರ ವಾದ ಮಂಡನೆಗಾಗಿ ಏ.10ಕ್ಕೆ ವಿಚಾರಣೆಯನ್ನು ಮುಂದೂಡಿದರು.
ಶಂಕಿತ ನಕ್ಸಲ್ ರೂಪೇಶ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನಲೆಯಲ್ಲಿ ನ್ಯಾಯಾಲಯದ ಆವರಣ ಹಾಗೂ ನಗರವ್ಯಾಪ್ತಿಯಲ್ಲಿ ಪೊಲೀಸ್ ಸರ್ಪಗಾವಲನ್ನು ನಿಯೋಜಿಸಲಾಗಿತ್ತು. ರೂಪೇಶ್ನನ್ನು ಕೂಡ ಪೊಲೀಸರು, ಕಮಾಂಡೋಗಳನ್ನು ಒಳಗೊಂಡು ‘ಟೈಟ್ ಸೆಕ್ಯೂರಿಟಿ’ ಯೊಂದಿಗೆ ಕರೆತರಲಾಗಿತ್ತು. ರೂಪೇಶ್ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಮುಗಿಸಿ ಹಿಂತಿರುಗುವ ವರೆಗೂ ನ್ಯಾಯಾಲಯಕ್ಕೆ ಬಿಗಿಭದ್ರತೆ ಕಲ್ಪಿಸಲಾಗಿತ್ತು. ಕೇರಳ ಪೊಲೀಸ ರೊಂದಿಗೆ ಜಿಲ್ಲೆಯ ಪೊಲೀಸರು ಅಧಿಕಾರಿಗಳು ಕೂಡ ಭದ್ರತಾ ಉಸ್ತುವಾರಿಯಲ್ಲಿ ತೊಡಗಿದ್ದರು. ವಿಚಾರಣೆ ಮುಗಿದ ಬಳಿಕ ರೂಪೇಶ್ನನ್ನು ಕೇರಳದ ವೈವೂರು ಕಾರಾಗೃಹಕ್ಕೆ ಕರೆದೊಯ್ಯಲಾಯಿತು.