ಕೂಡಿಗೆ, ಮಾ. 19: ಶಿರಂಗಾಲ ಗ್ರಾಮದ ಗ್ರಾಮದೇವತೆ ಶ್ರೀ ಮಂಟಿಗಮ್ಮತಾಯಿಗೆ ಎರಡು ವರ್ಷಗಳಿಗೊಮ್ಮೆ ನಡೆಸಲಾಗುವ ಜಾತ್ರೋತ್ಸವದ ಅಂಗವಾಗಿ ಇಂದು ಪ್ರಥಮ ಪೂಜೋತ್ಸವ ಕಾರ್ಯಕ್ರಮ ಪ್ರಾರಂಭಗೊಂಡಿತು.

ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಗಂಗಾಪೂಜೆ ಮತ್ತು ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ಶ್ರೀ ಮಂಟಿಗಮ್ಮ ದೇವಸ್ಥಾನಕ್ಕೆ ತರಲಾಯಿತು. ಸೋಮವಾರಪೇಟೆಯ ವಿರಕ್ತಮಠದ ಶ್ರೀ ವಿಶ್ವೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬನದ ದೇವಾಲಯದಲ್ಲಿ ಗಣಪತಿ ಹೋಮ, ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೋತ್ಸವಗಳು ನಡೆದವು.

ಇದೇ ಸಂದರ್ಭ ಹಾಸನ ಜಿಲ್ಲೆಯ ಹಾಗೂ ಶಿರಂಗಾಲದ ಪಕ್ಕದ ಗ್ರಾಮವಾದ ಕಡುವಿನ ಹೊಸಹಳ್ಳಿ ಗ್ರಾಮದ ದಾನಿಗಳಾದ ಕುಮಾರಸ್ವಾಮಿ, ವಿಶಾಲಾಕ್ಷಿ ಕಾಳೇಗೌಡ, ಪುಷ್ಪಕುಮಾರ್ ಅವರು ದಿ. ಕರಿಗೌಡ ಅವರ ಜ್ಞಾಪಕಾರ್ಥವಾಗಿ ಸುಮಾರು ರೂ. 50,000 ಮೊತ್ತದ ಮಂಟಿಗಮ್ಮ ತಾಯಿಯ ಬೆಳ್ಳಿ ವಿಗ್ರಹವನ್ನು ದೇವಸ್ಥಾನಕ್ಕೆ ಅರ್ಪಿಸಿದರು. ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ. ನಂಜುಂಡಪ್ಪ ಮತ್ತು ಕುಟುಂಬಸ್ಥರು ದೇವಸ್ಥಾನಕ್ಕೆ ಕಾಣಿಕೆ ಹುಂಡಿ, ಚಂದ್ರಕಲಾ ರವಿ, ದಿಪ್ನಾ ಶಿರಂಗಾ, ಎಸ್.ವಿ. ನಂಜುಂಡಸ್ವಾಮಿ ಅವರು ಅನ್ನದಾನ ಮತ್ತು ಶಿರಂಗಾಲದ ಸರೋಜಮ್ಮ ಮತ್ತು ಎಸ್.ವಿ. ದಿನೇಶ್ ಕುಟುಂಬಸ್ಥರಿಂದ ಮಂಗಳವಾದ್ಯವನ್ನು ಸೇವಾರ್ಥ ನೀಡಿದ್ದಾರೆ. ಈ ಸಂದರ್ಭ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಸುತ್ತಮುತ್ತಲ ಭಕ್ತಾದಿಗಳು ಇದ್ದರು.