ಕುಶಾಲನಗರ, ಮಾ. 18: ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಬೃಹತ್ ಕಟ್ಟಡಗಳಿಂದ ಹೊರ ಸೂಸುವ ಕಲುಷಿತ ತ್ಯಾಜ್ಯವನ್ನು ನೇರವಾಗಿ ನದಿಗೆ ಹರಿಸಲು ಚರಂಡಿ ನಿರ್ಮಿಸುತ್ತಿದ್ದ ಸಂದರ್ಭ ಸ್ಥಳೀಯರು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ಕುಶಾಲನಗರ ಮೈಸೂರು ರಸ್ತೆಯಲ್ಲಿ ಚರಂಡಿ ಮೂಲಕ ಹರಿಯುತ್ತಿರುವ ಕಲುಷಿತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನೇರವಾಗಿ ನದಿಗೆ ಹರಿಸಲು ಪಟ್ಟಣ ಪಂಚಾಯಿತಿ ಮೂಲಕ ಇಂಗು ಗುಂಡಿಯೊಂದನ್ನು ನಿರ್ಮಿಸಿ ಅದನ್ನು ಪಂಚಾಯಿತಿಯ ಸಕ್ಕಿಂಗ್ ಯಂತ್ರದ ಮೂಲಕ ವಿಲೇವಾರಿ ಮಾಡುವ ಕಾರ್ಯ ಕಳೆದ 2 ತಿಂಗಳಿನಿಂದ ನಡೆಯುತ್ತಿತ್ತು.

ದಿನವೊಂದಕ್ಕೆ 50 ಸಾವಿರ ಲೀಟರ್ ಪ್ರಮಾಣದ ಕಲುಷಿತ ನೀರನ್ನು ನದಿಗೆ ಹರಿಸಲು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸುತ್ತಿದ್ದ ಸಂದರ್ಭ ಸ್ಥಳಕ್ಕೆ ತೆರಳಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಮತ್ತು ಸ್ಥಳೀಯ ಜನಪ್ರತಿನಿಧಿ ಡಿ.ಕೆ. ತಿಮ್ಮಪ್ಪ ಮತ್ತಿತರರು ಕೆಲಸ ಸ್ಥಗಿತಗೊಳಿಸಲು ಒತ್ತಾಯಿಸಿದರು.

ಯಾವದೇ ಹಂತದಲ್ಲಿ ಕಲುಷಿತ ನೀರನ್ನು ನೇರವಾಗಿ ನದಿಗೆ ಹರಿಸಬಾರದು. ಈ ಸಂಬಂಧ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳದಲ್ಲಿದ್ದ ಕಾರ್ಮಿಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಲಾಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಚಂದ್ರಮೋಹನ್, ಕೆ.ಜಿ. ಮನು, ಕೆ.ಆರ್. ಶಿವಾನಂದನ್, ಬೋಸ್ ಮೊಣ್ಣಪ್ಪ, ಕೊಡಗನ ರಮೇಶ್, ಹರ್ಷ, ಶಿವರಾಜ್ ಮತ್ತಿತರರು ಇದ್ದರು.