ಸೋಮವಾರಪೇಟೆ, ಮಾ. 17: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಶಾರದಾ ಪೂಜೆ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಪದವಿಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲ ಹೆಚ್.ಕೆ. ಉಮೇಶ್ ಮಾತನಾಡಿ, ಯಾವದೇ ಪಠ್ಯವನ್ನು ಇಷ್ಟಪಟ್ಟು ಓದುವದರಿಂದ ಹೆಚ್ಚಿನ ಅಂಕಗಳಿಸಲು ಸಾಧ್ಯವೆಂದರು. ಸತತ ಪರಿಶ್ರಮ, ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಎಂ.ಎಂ. ಯಶವಂತಕುಮಾರ್ ವಹಿಸಿದ್ದರು.

ಇದೇ ಸಂದರ್ಭ ಇಕೋ ಕ್ಲಬ್ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದ ಗಣಿತ ವಿಜ್ಞಾನ ಒಲಂಪಿಯಾಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಕೆ.ಆರ್. ಹರ್ಷಿತಾರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿವೇಕಾನಂದ ಯೂತ್ ಮೂವ್‍ಮೆಂಟ್ ಮತ್ತು ರೋಟರಿಸಂಸ್ಥೆ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಪ್ರಯೋಗ ಪ್ರಾತ್ಯಕ್ಷಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.