ಸೋಮವಾರಪೇಟೆ,ಮಾ.17: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಿವಮೊಗ್ಗದ ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ ವತಿಯಿಂದ ರೂ. 25 ಲಕ್ಷಗಳ ಪರಿಹಾರವನ್ನು ಒದಗಿಸಲಾಯಿತು.
ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ನ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲೆಯ ಪ್ರಾಕೃತಿಕ ವಿಕೋಪಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ, ಪ್ರವಾಹದಿಂದಾಗಿ ಸಂತ್ರಸ್ಥರಾದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಸ್ಕಾಲರ್ಶಿಪ್ ಸೇರಿದಂತೆ ಇನ್ನಿತರ ಅಗತ್ಯಗಳಿಗಾಗಿ ಎಂಐಎ ಮೂಲಕ ಅಸೋಸಿಯೇಷನ್ನ ಸದಸ್ಯರು ಮತ್ತು ಕೆಲಸಗಾರರಿಂದ ಸಂಗ್ರಹಿಸಲಾಗಿದ್ದ ರೂ. 25,11,497ಗಳ ಚೆಕ್ನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು. ಹಸ್ತಾಂತರಿಸಿದ ಹಣವನ್ನು ಸಂತ್ರಸ್ಥ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವಂತೆ ಪ್ರಮುಖರು ಮನವಿ ಮಾಡಿದರು.
ಶಿವಮೊಗ್ಗದ ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ನ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ, ಐಐಎಫ್ ಚಾಪ್ಟರ್ ಅಧ್ಯಕ್ಷ ಬೆನಕಪ್ಪ, ಪ್ರಾರ್ಥನ ಇಂಡಸ್ಟ್ರೀಸ್ನ ಮಾಲೀಕ ಕೆ.ವಿ. ನಾರಾಯಣ್, ಶಾಂತಲ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಡಿ.ಬಿ. ಅಶೋಕ್ ಅವರುಗಳು ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಗಣಪತಿ ಅವರೊಂದಿಗೆ ಆಶ್ರಮಕ್ಕೆ ತೆರಳಿ ನೆರವಿನ ಹಣವನ್ನು ಹಸ್ತಾಂತರಿಸಿದರು.