ಸುಂಟಿಕೊಪ್ಪ, ಮಾ. 17: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ 34 ವರ್ಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿಸಿ 2019 ರ ಫೆಬ್ರವರಿ ಅಂತ್ಯಕ್ಕೆ ವಯೋ ನಿವೃತ್ತಿ ಹೊಂದಿದ ವಿಜ್ಞಾನ ಶಿಕ್ಷಕಿ ಮುಕ್ಕಾಟಿರ ಎನ್. ಲತಾ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿ ವೃಂದದ ವತಿಯಿಂದ ಏರ್ಪಡಿಸಿದ್ದ ಗೌರವ ಸಮರ್ಪಣಾ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಬಾಲಕೃಷ್ಣ ಅವರು ಶಿಕ್ಷಕಿ ಎಂ.ಎನ್. ಲತಾ ಅವರನ್ನು ಸನ್ಮಾನಿಸಿದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಎಂ.ಎನ್. ಲತಾ, ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಎಂ. ರಂಗಸ್ವಾಮಿ, ನೆರವಂಡ ಕೆ. ಉಮೇಶ್ ಮಾತನಾಡಿದರು. ಶಿಕ್ಷಕಿ ಕೆ.ಕೆ. ಪುಷ್ಪ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಎಸ್.ಆರ್. ಚಿತ್ರಾ ಸ್ವಾಗತಿಸಿದರು. ಶಿಕ್ಷಕಿ ಶಾಂತ ಹೆಗಡೆ ವಂದಿಸಿದರು. ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಶಿಕ್ಷಕಿಯರಾದ ಟಿ. ಪವಿತ್ರ, ಎಂ.ಆರ್. ಸುನಂದ, ಮಂಜುಳಾ ಎಂ. ಕೆರೂರ್ ಮಾತನಾಡಿದರು. ವಿದ್ಯಾರ್ಥಿ ನಿಶಾದ್ ಗುರುವಂದನೆ ಕುರಿತು ಸ್ವತಃ ರಚಿಸಿದ ಕವನ ವಾಚಿಸಿ ಗಮನ ಸೆಳೆದನು.