ಕುಶಾಲನಗರ, ಮಾ. 17: ಕಾವೇರಿ ತಾಲೂಕಾಗಿ ರಚನೆಯಾದ ಕುಶಾಲನಗರದಲ್ಲಿ ತಾಲೂಕು ಭವನ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕಿದೆ ಎಂದು ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದ ಜನತೆಯ ಬಹುದೊಡ್ಡ ಕನಸಾಗಿದ್ದ ಕಾವೇರಿ ತಾಲೂಕು ಘೋಷಣೆಯಾಗಿದೆ.

ವಿವಿಧ ಇಲಾಖೆಗಳ 20 ಕ್ಕೂ ಅಧಿಕ ಕಚೇರಿಗಳು ತಾಲೂಕು ಕೇಂದ್ರದಲ್ಲಿ ಕಾರ್ಯ ಆರಂಭಿಸಬೇಕಿದ್ದು ಎಲ್ಲಾ ಕಚೇರಿಗಳು ಒಂದೇ ಸೂರಿನಡಿ ಬರುವಂತೆ ತಾಲೂಕು ಭವನ ನಿರ್ಮಾಣವಾಗಬೇಕಿದೆ.

ಕುಶಾಲನಗರದ ಗುಂಡುರಾವ್ ಬಡಾವಣೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಕುಶಾಲನಗರ ಸುತ್ತಮುತ್ತ ವಿಶಾಲವಾದ ಪ್ರದೇಶ ಲಭ್ಯವಿದ್ದು ಸೂಕ್ತ ಸ್ಥಳ ಗುರುತಿಸಿ ತಾಲೂಕು ಭವನ ನಿರ್ಮಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಕುಶಾಲನಗರ ಪಟ್ಟಣ ಪಂಚಾಯ್ತಿ ಹಳೆಯ ಕಟ್ಟಡ ಜಾಗದಲ್ಲಿ ನೂರಾರು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಇದರಿಂದ ಪಟ್ಟಣ ಪಂಚಾಯ್ತಿಗೂ ಲಕ್ಷಾಂತರ ಆದಾಯ ದೊರಕಲಿದೆ. ಆದ್ದರಿಂದ ಮೇಲಿನ ವಿಚಾರಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಫಿಲೋಮಿನಾ, ಉದ್ಯಮಿ ಉಮಾಶಂಕರ್ ಇದ್ದರು.