ಗೋಣಿಕೊಪ್ಪಲು, ಮಾ. 17: ಬಾಳೆಲೆ ಸಮೀಪ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಜಾಗಲೆ ಗ್ರಾಮದಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮೊಸಳೆಯೊಂದು ಸೆರೆಯಾಗಿದ್ದು, ಮೈಸೂರು (ಮೊದಲ ಪುಟದಿಂದ) ಮೃಗಾಲಯಕ್ಕೆ ಸಾಗಿಸಲಾ ಗುವದು ಎಂದು ಪೊನ್ನಂಪೇಟೆ ವಲಯಾರಣ್ಯಾಧಿಕಾರಿ ಗಂಗಾಧರ್ ತಿಳಿಸಿದ್ದಾರೆ.

ನಿಟ್ಟೂರು ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೀರು ಬತ್ತುತ್ತಿರುವ ಹಿನ್ನೆಲೆ ಮೊಸಳೆಯು ನೀರಿನ ಆಶ್ರಯಕ್ಕಾಗಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಅಲ್ಲಿನ ಅಳಮೇಂಗಡ ಚಂಗಪ್ಪ ಎಂಬವರ ಕೆರೆಯತ್ತ ಬರುವ ಸಂದರ್ಭ ಅಲ್ಲಿನ ಕಾರ್ಮಿಕರ ಕಣ್ಣಿಗೆ ಸೆರೆಯಾಗಿದೆ.ಇದೇ ಸಂದರ್ಭ ಸ್ಥಳೀಯ ನಿವಾಸಿ ರಾಜ್ಯ ವೈಲ್ಡ್ ಲೈಫ್ ಫಸ್ಟ್ ಸದಸ್ಯ ಚೆಕ್ಕೇರ ಸೂರ್ಯ ಅಯ್ಯಪ್ಪ ಅವರಿಗೆ ಮಾಹಿತಿ ನೀಡಲಾದ ಹಿನ್ನೆಲೆ ಕಾರ್ಮಿಕರ ಸಹಕಾರ ದೊಂದಿಗೆ ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಅಳಮೇಂಗಡ ಚಂಗಪ್ಪ ಅವರ ಕಾಫಿಕಣದಲ್ಲಿ ಬಿಡಲಾಯಿತು. ಮೊಸಳೆ ಹೊರಹೋಗದಂತೆ ಬೋನು ಮಾದರಿ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾಗರಹೊಳೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು . ಜಾಗಲೆ ಗ್ರಾಮವು ಪೊನ್ನಂಪೇಟೆ ಅರಣ್ಯ ವಿಭಾಗಕ್ಕೆ ಒಳಪಟ್ಟಿದ್ದು ವಲಯಾರಣ್ಯಾಧಿಕಾರಿ ಗಂಗಾಧರ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ದೌಡಾಯಿಸಿ ಮೊಸಳೆಯನ್ನು ಸುರಕ್ಷಿತವಾಗಿ ಸಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡರು.ಅಳಮೇಂಗಡ ಚಂಗಪ್ಪ ಅವರ ತೋಟದ ವ್ಯವಸ್ಥಾಪಕ ಕುಸುಮಾಧರ ಅವರ ನೇತೃತ್ವದಲ್ಲಿ ರಾತ್ರಿ 9 ಗಂಟೆಯ ನಂತರ ಸುಮಾರು 2 ಗಂಟೆ ಕಾರ್ಯಾಚರಣೆ ನಡೆಸುವ ಮೂಲಕ ಹಾಗೂ ಕಾರ್ಮಿಕರಾದ ಯರವರ ಪಾಲ, ಮುತ್ತ, ಸುಬ್ರಮಣಿ, ಸೋಮ ಮತ್ತು ಮಣಿ ತಂಡ ಟಿಂಬರ್ ಹಗ್ಗವನ್ನು ಬಳಸಿ, ಮೊಸಳೆಯನ್ನು ಚಾಣಾಕ್ಷತನದಿಂದ ಸೆರೆ ಹಿಡಿದು ಕೆರೆಯಿಂದ ಸುಮಾರು 20 ಮೀಟರ್ ಅಂತರದಲ್ಲಿರುವ ಕಾಫಿಕಣಕ್ಕೆ ಸಾಗಿಸಲು ಯಶಸ್ವಿಯಾದರು.

ಇಂದು ಬೆಳಿಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ಸಿಬ್ಬಂದಿವರ್ಗ, ಕಲ್ಲಳ್ಳ ವಲಯಾ ರಣ್ಯಾಧಿಕಾರಿ ಶಾಂತಕುಮಾರ್ ಮತ್ತು ತಂಡ ಮೊಸಳೆ ರಕ್ಷಣೆಗೆ ಧಾವಿಸಿ ಮೊಕ್ಕಾಂ ಹೂಡಿದರು.

ಮೊಸಳೆಯನ್ನು ಅರಣ್ಯ ಇಲಾಖೆಯ ಜೀಪ್‍ನಲ್ಲಿ ಪೊನ್ನಂಪೇಟೆಗೆ ಮೊದಲು ಸಾಗಿಸಿ, ಪಶುವೈದ್ಯರಿಂದ ಪರಿಶೀಲನೆ ನಡೆಸಿ ಮೈಸೂರು ಮೃಗಾಲಯಕ್ಕೆ ಸಾಗಿಸಲಾಗುವದು ಎಂದು ತಿಳಿಸಿದ್ದಾರೆ. ಮೊಸಳೆ ಆರೋಗ್ಯವಾಗಿದ್ದು ಸುಮಾರು 60 ರಿಂದ 70 ಕೆ.ಜಿ. ತೂಕ ಇರುವದಾಗಿ ಅಂದಾಜಿ ಸಲಾಗಿದೆ.

ಕಾಫಿ ಕಣದಲ್ಲಿ ಮೊಸಳೆಗೆ ಆಗಿಂದಾಗ್ಗೆ ನೀರು ಹಾಕಲಾಗುತ್ತಿದ್ದು, ಯಾವದೇ ಆಹಾರ ನೀಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇಂದು ಇಲಾಖಾಧಿಕಾರಿಗಳು ಪೊನ್ನಂಪೇಟೆಯಲ್ಲಿ ಮಾಂಸ ಆಹಾರ ನೀಡಿ ಮೈಸೂರಿಗೆ ಸಾಗಿಸುವ ಉದ್ದೇಶವಿದೆ ಎನ್ನಲಾಗಿದೆ.

ಮೊಸಳೆ ಸೆರೆ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಣೆ ಮಾಡಿದರು.

ವರದಿ: ಟಿ.ಎಲ್. ಶ್ರೀನಿವಾಸ್