ವೀರಾಜಪೇಟೆ, ಮಾ. 16: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ತಾ. 23 ರಂದು ಜಿಲ್ಲಾಮಟ್ಟದ ಮಹಿಳಾ ಕ್ರೀಡಾಕೂಟವನ್ನು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲೆ ಪ್ರೋ. ಇಟ್ಟಿರ ಕಮಾಲಾಕ್ಷಿ ಬಿದ್ದಪ್ಪ ಹೇಳಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಲಹಾ ಸಮಿತಿ, ನ್ಯಾಕ್ ಸಮಿತಿ ಸದಸ್ಯೆ ಹಾಗೂ ಅಂತರರಾಷ್ಟ್ರಿಯ ಬಾಸ್ಕೆಟ್ ಬಾಲ್ ಆಟಗಾರ್ತಿ ಕಮಾಲಾಕ್ಷಿ ಅವರು ಗ್ರಾಮೀಣ ಮಟ್ಟದಲ್ಲಿನ ಕ್ರೀಡಾ ಪ್ರತಿಭೆಗಳು ಅವಕಾಶದಿಂದ ವಂಚಿತವಾಗುತ್ತಿದ್ದಾರೆಂಬ ವಿಷಯವನ್ನು ಮುಂದಿಟ್ಟು ವಿಶ್ವವಿದ್ಯಾನಿಲಯದಿಂದ ಅನುಮತಿ ಪಡೆದುಕೊಂಡು ಕಳೆದ ಮೂರು ವರ್ಷಗಳಿಂದ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದಾರೆ. ಗ್ರಾಮೀಣ ಕ್ರೀಡಾಕೂಟದಲ್ಲಿ ಹಾಕಿ, ವಾಲಿಬಾಲ್, ಕಬಡ್ಡಿ, ಲಗೋರಿ, ಥ್ರೋಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟ ಗಳನ್ನು ಏರ್ಪಡಿಸಲಾಗುವದು. ಗ್ರಾಮಾಂತರ ಮಹಿಳಾ ಕ್ರೀಡಾ ಕೂಟದಲ್ಲಿ ಜಿಲ್ಲೆಯ 14 ಕಾಲೇಜುಗಳು ಭಾಗವಹಿಸುತ್ತಿದೆ. ಕ್ರೀಡಾಕೂಟದ ಸಂಚಾಲಕಿ ಡಾ. ಮೇಕತಂಡ ದೇಚಮ್ಮ ಮಾತನಾಡಿ ಕಳೆದ 1980 ರಲ್ಲಿ ವೀರಾಜಪೇಟೆಯಲ್ಲಿ ಪ್ರಾರಂಭಗೊಂಡ ಮಹಿಳಾ ಕಾವೇರಿ ಕಾಲೇಜು ಅನೇಕ ವರ್ಷಗಳ ನಂತರ ಪುರುಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಕಾಲೇಜು ಪ್ರಾರಂಭಗೊಂಡಾಗ ಇದ್ದ ಹಲವಾರು ಸಿಬ್ಬಂದಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದು, ಅಂತಹ ವರನ್ನು ಇದೇ ಸಮಾರಂಭದಲ್ಲಿ ಸನ್ಮಾನಿಸಲಾಗುವದು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಯಮುಡಿಯ ಬೆಳೆಗಾರ ಚೆರಿಯಪಂಡ ಡಾಟಿ ರವಿ, ಜಿಲ್ಲಾ ಮಹಿಳಾ ಹಾಕಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಕೋದಂಡ ಸ್ವಾತಿ ಬೋಪಣ್ಣ, ಮಂಡೆಪಂಡ ಪುಷ್ಪಾ ಕುಟ್ಟಣ್ಣ ಉಪಸ್ಥಿತರಿರುವರು ಎಂದು ಹೇಳಿದರು. ಗೋಷ್ಠಿಯಲ್ಲಿ ಮೂಕಚಂಡ ನಾಚಪ್ಪ ಉಪಸ್ಥಿತರಿದ್ದರು.