ಮಡಿಕೇರಿ, ಮಾ. 16: ಹಾಕಿ ಇಂಡಿಯಾ ವತಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಿರಿಯ ಹಾಕಿ ಶಿಬಿರದಲ್ಲಿ ಕೊಡಗಿನ ಮೂವರು ಯುವ ಆಟಗಾರರಿದ್ದು, ಇವರಲ್ಲಿ ಚಂದೂರ ಪೂವಣ್ಣ ಕೂಡ ಒಬ್ಬ ಆಟಗಾರನಾಗಿದ್ದಾನೆ.

ಸೋಮವಾರಪೇಟೆಯ ಸೂರ್ಯ, ಕುಶಾಲನಗರದವರಾದ ಕೂಡಿಗೆ ಶಾಲಾ ವಿದ್ಯಾರ್ಥಿ ತ್ರಿಶೂಲ್ ಗಣಪತಿ ಹಾಗೂ ಕಂಡಂಗಾಲದ ಚಂದೂರ ಪೂವಣ್ಣ ಶಿಬಿರದಲ್ಲಿರುವ ಆಟಗಾರರು. ಶಿಬಿರದಲ್ಲಿ ಪ್ರಸ್ತುತ 60 ಕ್ರೀಡಾಪಟುಗಳಿದ್ದು, ಇವರಲ್ಲಿ ಸಂಭಾವ್ಯ 33 ಆಟಗಾರರನ್ನು ಆಯ್ಕೆ ಮಾಡಿ 2021ರ ವಿಶ್ವಕಪ್ ಜೂನಿಯರ್ ಹಾಕಿಗೆ ಕಠಿಣ ತರಬೇತಿ ಗೊಳಿಸಲಾಗುವದು.

ಪೂವಣ್ಣ ಈ ಹಿಂದೆ ವೀರಾಜಪೇಟೆ ಸೆಂಟ್ ಆ್ಯನ್ಸ್ ಶಾಲೆ ಹಾಗೂ ಗೋಣಿಕೊಪ್ಪ ಕಾಲ್ಸ್ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್‍ನಲ್ಲಿ ವ್ಯಾಸಂಗ ಮಾಡಿದ್ದು, ಹಾಕಿಯಲ್ಲಿನ ಪ್ರತಿಭೆ ಮೂಲಕ ಪ್ರಸ್ತುತ ಬೆಂಗಳೂರು ಸಾಯಿಯಲ್ಲಿ ಸೇರ್ಪಡೆಯಾಗಿದ್ದಾನೆ. ಎರಡು ರಾಷ್ಟ್ರೀಯ ಪಂದ್ಯಾವಳಿ ಸೇರಿದಂತೆ ಹಾಕಿ ಬೆಂಗಳೂರು ತಂಡವನ್ನು ಈತ ಪ್ರತಿನಿಧಿಸಿದ್ದು, ಉತ್ತಮ ಸಾಧನೆಯ ಮೂಲಕ ಜೂನಿಯರ್ ಶಿಬಿರಕ್ಕೆ ಆಯ್ಕೆಯಾಗಿದ್ದು, ಭರವಸೆ ಮೂಡಿಸುತ್ತಿದ್ದಾನೆ. ಪೂವಣ್ಣ ಕಂಡಂಗಾಲದ ನಿವಾಸಿ ಚಂದೂರ ಎಸ್. ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ ಮಲ್ಲೇಂಗಡ) ದಂಪತಿಯ ಪುತ್ರ.