ಕುಶಾಲನಗರ, ಮಾ. 15: ನಿರಂತರ ಪ್ರಯತ್ನಗಳ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕೊಂಚೂರಿನ ಸವಿತಾ ಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕುಶಾಲನಗರ ಮಾದಾಪಟ್ಟಣದಲ್ಲಿ ಲುಕ್ಸ್ ಬ್ಯೂಟಿ ಕೇರ್ ಆಶ್ರಯದಲ್ಲಿ ಸವಿತಾ ಸಮಾಜದ ಬಂಧುಗಳಿಗೆ ಹಮ್ಮಿಕೊಂಡಿದ್ದ ಪ್ರತ್ರಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯತ್ನಗಳು ಯಶಸ್ಸಿನ ಹಾದಿಯ ಮೆಟ್ಟಿಲುಗಳಾಗಿ ಪರಿವರ್ತನೆಗೊಳ್ಳಲು ಶ್ರಮ ಹಾಗೂ ಆತ್ಮವಿಶ್ವಾಸ ಅಗತ್ಯ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪ್ರಮುಖರಾದ ಯು.ಬಿ.ಸುನಿಲ್ ಮಾತನಾಡಿ, ಸವಿತಾ ಸಮುದಾಯ ಬಾಂಧವರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಕುಲವೃತ್ತಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಿದೆ ಎಂದರು. ಚಲನಚಿತ್ರ ನಟಿ ಆಶಾ ಭಂಡಾರಿ, ಸವಿತಾ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿದರು.

ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ವೈ. ಪುಟ್ಟರಾಜು, ಕುಶಾಲನಗರ ಸವಿತಾ ಸಮಾಜದ ಅಧ್ಯಕ್ಷ ಜಗದೀಶ್ ಭಂಡಾರಿ, ಪ್ರಮುಖರಾದ ಮಂಜುನಾಥ್ ಚೆಟ್ಟಿಯಾರ್, ನಾಗಮ್ಮ, ದೊರೆಸ್ವಾಮಿ, ರವೀಂದ್ರ, ಮತ್ತಿತರರು ಇದ್ದರು.

ಕಾರ್ಯಕ್ರಮ ಸಂಯೋಜಕ ಆರ್. ಲೋಕೇಶ್ ಪ್ರಾಸ್ತಾವಿಕ ನುಡಿಗಳಾಡಿದರು. ಹಲವು ವಿಭಾಗಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ನಂತರ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.