ಸುಂಟಿಕೊಪ್ಪ, ಮಾ. 16: ಸುಂಟಿಕೊಪ್ಪ ಗ್ರಾಮ ದೇವರು, ಶ್ರೀ ಚಾಮುಂಡಿ, ಶ್ರೀ ಮುತ್ತಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಗ್ರಾಮ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು.
ಪಟ್ಟಣದ ಚೆಸ್ಕಾಂ ಇಲಾಖೆಯ ಹಿಂಬಾಗ ಲಕ್ಷ್ಮಿ ತೋಟದ ಆವರಣ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಗ್ರಾಮ ದೇವತೆಯ ಪ್ರತಿಷ್ಠಾಪನಾ ಅಂಗವಾಗಿ ದೇವಾಲಯದ ಆವರಣದ ಸುತ್ತಮುತ್ತಲೂ ತಳಿರು ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ನಾದಸ್ವರಗಳೊಂದಿಗೆ ವಿಶೇಷ ಪ್ರತಿಷ್ಠಾಪನಾ ಪೂಜಾ ಕೈಂಕರ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಗ್ರಾಮ ದೇವರ ಪ್ರತಿಷ್ಠಾನದ ಅಂಗವಾಗಿ ವಿವಿಧ ಕೈಂಕರ್ಯದೊಂದಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಪ್ರತಿಷ್ಠಾಪನಾ ವಿಶೇಷ ಪೂಜಾ ಕೈಂಕರ್ಯವನ್ನು ಗೋಪಾಲಕೃಷ್ಣ ಕೆದಿಲಾಯ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕರಾದ ಗಣೇಶ್ ಭಟ್ ತಂಡದವರು ನೆರವೇರಿಸಿದರು.
ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಕಾರ್ಯದರ್ಶಿ ಶಶಿಕಾಂತರೈ, ಖಜಾಂಚಿ ಎಸ್.ಜಿ. ಶ್ರೀನಿವಾಸ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಆಗಮಿಸಿದ್ದರು.