ಮಡಿಕೇರಿ, ಮಾ. 15: ಮಹಿಳಾ ದಿನಾಚರಣೆಯ ಅಂಗವಾಗಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮೂವರು ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಜಯಶ್ರೀ ಅನಂತ್, ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಮಹೇಶ್ ಪೌರಕಾರ್ಮಿಕೆ ಪುಟ್ಟಮ್ಮ, ಗುಡಿ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶಂಕರಿಯಮ್ಮ, ಪುಟ್ಟ ಮಕ್ಕಳನ್ನು ಸಲಹಿ ಬೆಳೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ನೆಲ್ಲಮಕ್ಕಡ ಎನ್.ಎ. ಗೀತಾ ಅವರುಗಳನ್ನು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಜಯಶ್ರೀ ಅನಂತಶಯನ ಅವರು ಮಾತನಾಡಿ, ಪುರುಷರು - ಮಹಿಳೆಯರು ಜೊತೆಯಲ್ಲೇ ಬಾಳುವೆ ನಡೆಸುತ್ತಿದ್ದು, ಮಹಿಳಾ ದಿನದಂದು ಪುರುಷರನ್ನು ಧೂಷಿಸಿ ಮಾತನಾಡುವದೇ ಸಾಧನೆ ಎಂಬಂತೆ ವರ್ತಿಸುವ ಕೆಲವರ ವರ್ತನೆ ಪ್ರಶ್ನಾರ್ಹ ಎಂದರು. ಭಾಷಣ, ಸಂದೇಶ, ವಿರೋಧ, ಏನು ಮಾಡಿದರು ಅರ್ಧ ನಾರೀಶ್ವರನ ಏಕಭಾವದಂತೆ ಹೊಂದಿ ನಡೆಯಬೇಕಾದುದು, ವಾಸ್ತವ ಮತ್ತು ಅವಶ್ಯ ಎಂದ ಅವರು, ಸಿಕ್ಕ ಸ್ವಾತಂತ್ರ್ಯವನ್ನು ಮಹಿಳೆಯರು ಸ್ವೇಚ್ಛೆಯಿಂದ ಬಳಸದೆ ನೆಮ್ಮದಿಯ ಬದುಕಿಗೆ ನಾಂದಿ ಹಾಡಬೇಕೆಂದರು.
ಅಧ್ಯಕ್ಷ ಜಿ.ಆರ್. ರವಿ ಮಾತನಾಡಿ ರೋಟರಿ ಮಿಸ್ಟಿ ಹಿಲ್ಸ್ ಮಹಿಳಾ ತಂಡ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುಪ್ರಿಯಾ ಸ್ವಾಗತಿಸಿದರು. ಸಂಧ್ಯಾ ಅಶೋಕ್ ಪರಿಚಯಿಸಿದರು. ರಶ್ಮಿ ಶೇಟ್, ಶಫಾಲಿ ರೈ, ಶಿಲ್ಪ ರಮೇಶ್, ರಾಧಿಕಾ ಪರಿಚಯಿಸಿದರು. ಶಮ್ಮಿ ವಂದನಾರ್ಪಣೆ ಮಾಡಿದರು.