ಕರಿಕೆ: ಮಾ. 15, ಕೊಡಗಿನ ಮೂರು ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾದ ತಲಕಾವೇರಿ ವನ್ಯ ಧಾಮವು ಪ್ರವಾಸಿಗರ ಮೋಜು ಮಸ್ತಿನ ತಾಣ ಹಾಗೂ ಕಸ ವಿಲೇವಾರಿ ಜಾಗವಾದಂತೆ ಕಾಣುತ್ತಿದೆ. ಇದನ್ನು ತಡೆಗಟ್ಟಿ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಬೇಕಾದ ಇಲಾಖೆ ಮಾತ್ರ ನಿದ್ರೆ ಮಾಡುತ್ತಿರುವದು ನಿಜಕ್ಕೂ ದುರಂತವೆ ಸರಿ.ಭಾಗಮಂಡಲ - ಕರಿಕೆ ರಸ್ತೆಯು ತಲಕಾವೇರಿ ವನ್ಯಧಾಮದೊಳಗೆ ನಾಲ್ಕು - ಐದು ಕಿ.ಮೀ. ಹಾದು ಹೋಗುತ್ತಿದ್ದು, ಇದರಲ್ಲಿ ಕೆಲವು ಜಲಪಾತಗಳು ಹರಿಯುತ್ತಿವೆ. ಇದರ ಬಳಿ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು ಇಲ್ಲಿ ನೀರು ಕುಡಿಯಲು ಬರುವ ಪ್ರಾಣಿಗಳು ಇದನ್ನು ಸೇವಿಸಿ ಸಾವನ್ನಪ್ಪುವ ಸಾದ್ಯತೆ ಕಂಡುಬಂದಿದೆ. ವನ್ಯಜೀವಿ ವಿಭಾಗದಲ್ಲಿ ಸಾಕಷ್ಟು ಅರಣ್ಯ ವೀಕ್ಷಕರಿದ್ದರೂ, ಕೂಡ ಇಲಾಖೆ ಇದನ್ನು ತಡೆಗಟ್ಟಲು ಕ್ರಮವಹಿಸದಿರುವ ದರಿಂದ ಮುಂದೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ.ಒಂದೆಡೆ ಕಾಡ್ಗಿಚ್ಚಿನಿಂದಾಗಿ ಅಮೂಲ್ಯ ವನ್ಯ ಸಂಪತ್ತು ನಮ್ಮಿಂದ ಕಣ್ಮರೆಯಾಗುತ್ತಿದ್ದು, ಇನ್ನೊಂದೆಡೆ ಇಲಾಖೆಯ ನಿರ್ಲಕ್ಷ್ಯದಿಂದ ವನ್ನಧಾಮದೊಳಗೆ ಕಸ, ಗಾಜಿನ ಬಾಟಲಿ ಹಾಗೂ ಇತರ ತ್ಯಾಜ್ಯಗಳನ್ನು ನಿರಂತರವಾಗಿ ಎಸೆಯುತ್ತಿರುವದರಿಂದ ಅಮೂಲ್ಯ ವನ್ಯ ಜೀವಿಗಳಜೀವಕ್ಕೆ ಮಾರಕವಾಗುವದರಲ್ಲಿ ಯಾವದೇ ಸಂದೇಹವಿಲ್ಲ. ಈ ಅರಣ್ಯ ಪ್ರದೇಶ ಭಾಗಮಂಡಲ ಹಾಗೂ ತಲಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದ ವ್ಯಾಪ್ತಿಯ ರಕ್ಷಣೆಗಾಗಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ 2 ಕಳ್ಳ ಬೇಟೆ ಶಿಬಿರದಲ್ಲಿ 8 ಜನ ದಿನಗೂಲಿ ನೌಕರರು, 2 ಜನ ಅರಣ್ಯ ರಕ್ಷಕರು ಒಬ್ಬ ಉಪವಲಯ

(ಮೊದಲ ಪುಟದಿಂದ) ಅರಣ್ಯ ಅಧಿಕಾರಿ ಇದ್ದು, ಪ್ರತಿ ದಿನಗೂಲಿ ನೌಕರರಿಗೆ ಪ್ರತಿ ತಿಂಗಳಿಗೆ ಕನಿಷ್ಟ 12000 ವೇತನ ಸರ್ಕಾರದಿಂದ ಪಾವತಿಯಾಗುತ್ತಿದೆ.

ಅಲ್ಲದೆ ಭಾಗಮಂಡಲ ವಲಯ ವ್ಯಾಪ್ತಿಯಲ್ಲಿ 7 ಜನ ದಿನಗೂಲಿ ಅರಣ್ಯ ವೀಕ್ಷಕರೂ ಇದ್ದರು ಪ್ರಯೋಜನ ಇಲ್ಲ. ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಪ್ರಕಾರ ವನ್ಯಧಾಮದೊಳಗೆ ಪ್ರವೇಶ, ಅಕ್ರಮ ಚಟುವಟಿಕೆ ಶಿಕ್ಷಾರ್ಹ ಅಪರಾಧ. ಕನಿಷ್ಟ ಮೂರು ವರ್ಷ ಜೈಲು ಶಿಕ್ಷೆಯಂತಹ ಕಾನೂನು ಇದ್ದರೂ ಇಲಾಖೆಯಿಂದ ಯಾವದೇ ರೀತಿಯ ಕ್ರಮ ಜರುಗುತ್ತಿಲ್ಲ. ನಾಲ್ಕೈದು ವರ್ಷಗಳ ದಾಖಲೆಯನ್ನು ತಿರುವಿದಾಗ ಯಾವದೇ ಕಳ್ಳ ಬೇಟೆ ಪ್ರಕರಣವನ್ನು ಪತ್ತೆಹಚ್ಚಿದ ನಿದರ್ಶನಗಳಿಲ್ಲ. ಇಲಾಖೆಯ ಸವಲತ್ತುಗಳನ್ನು ಉಪಯೋಗಿಸಿ ವನ್ಯ ಸಂರಕ್ಷಣೆಯತ್ತ ಗಮನಹರಿಸದೆ ಕಾಲ ಕಳೆಯುತ್ತಿರುವ ಇಲಾಖೆಯ ನಿದ್ದೆ ಬಿಡಿಸುವತ್ತ ಹಿರಿಯ ಅಧಿಕಾರಿಗಳು ಗಮನಹರಿಸಬೇಕೆಂಬದೇ ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳ ಆಗ್ರಹವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಛಾಯಾಚಿತ್ರದಲ್ಲಿ ಪ್ರಾಣಿಗಳ ಚಿತ್ರ ತೋರಿಸುವ ಪರಿಸ್ಥಿತಿ ಉಂಟಾಗಬಾರದೆಂಬದೇ ನಮ್ಮ ಆಶಯವಾಗಿದೆ.

- ಹೊದ್ದೆಟ್ಟಿ ಸುಧೀರ್