ಮಡಿಕೇರಿ, ಮಾ. 15: ಕಳೆದ ವಾರದಿಂದ ಇಲ್ಲಿನ ಮಹದೇವಪೇಟೆಯ ನೂತನ ಮಾರುಕಟ್ಟೆ ಸಂಕೀರ್ಣದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದು, ಸಂತೆ ದಿನವಾದ ಇಂದು ಎಲ್ಲರಿಗೆ ಒಂದೇ ಸೂರಿನಡಿ ವ್ಯಾಪಾರದೊಂದಿಗೆ, ರಸ್ತೆ ಬದಿ ತರಕಾರಿ ಮಾರಾಟ ಕಂಡು ಬರಲಿಲಿಲ್ಲವಾದರೂ, ಕೆಲವರು ಜಾಗದ ವಿಚಾರವಾಗಿ ಪರಸ್ಪರ ಬಡಿದಾಡಿಕೊಂಡಿರುವ ಪ್ರಸಂಗ ನಡೆದಿದೆ. ಹಳ್ಳಿಗಳಿಂದ ತರಕಾರಿ ತಂದಿರುವ ರೈತರಿಗೆ ಜಾಗವಿಲ್ಲದೆ ಅಲ್ಲಲ್ಲಿ ಗುಂಪುಗೂಡಿ ಒಂದೆಡೆ ವ್ಯಾಪಾರದಲ್ಲಿ ನಿರತರಾಗಿದ್ದು ಗೋಚರಿಸಿತು.
ಇನ್ನು ಮಾರುಕಟ್ಟೆಯ ಒಂದಿಷ್ಟು ಮಂದಿ ನಾಲ್ಕಾರು ಕಡೆ ಜಾಗ ಹಿಡಿದಿಟ್ಟುಕೊಂಡು, ಇತರರಿಗೆ ಸ್ಥಳಾವಕಾಶ ಕಲ್ಪಿಸದೆ ಪರಸ್ಪರ ಬಡಿದಾಡಿಕೊಂಡರೆ, ಕೆಲವರಿಗೆ ಮೋಜಿನಂತೆ ಕಂಡು ಬಂದ ಪ್ರಸಂಗ ಎದುರಾಯಿತು. ಹಲವಷ್ಟು ವ್ಯಾಪಾರಿಗಳು ಈ ಬಗ್ಗೆ ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ಕೆಲವರು ನಾಲ್ಕೈದು ಕಡೆ ಜಾಗ ಹಿಡಿದಿಟ್ಟುಕೊಂಡು, ಅಮಾಯಕರಿಂದ ಹೆಚ್ಚಿನ ಹಣ ಪಡೆದು ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತಿರುವದಾಗಿ ಬೊಟ್ಟು ಮಾಡಿದರು.
ಈ ಬಗ್ಗೆ ನಗರಸಭಾ ಆಡಳಿತ ಗಮನ ಹರಿಸಿ, ತರಕಾರಿ, ಹೂವು, ತೆಂಗಿನಕಾಯಿ, ತಿಂಡಿ ಪದಾರ್ಥಗಳು ಇತ್ಯಾದಿಗಳಿಗೆ ನಿಗಧಿತ ಸ್ಥಳ ಗುರುತಿಸಿ, ಗ್ರಾಹಕರಿಗೆ ಒಂದೆಡೆ ಆಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವ ಮೂಲಕ ಗೊಂದಲ ಸರಿಪಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಗ್ರಾಮೀಣ ರೈತರಿಗೂ ನಿರ್ಧಿಷ್ಟ ಸ್ಥಳಾವಕಾಶ ಒದಗಿಸಿಕೊಡುವಂತೆ ಒತ್ತಾಯಿಸಿದರು. ಮುಗ್ಧರ ಮೇಲಿನ ಗೂಂಡಾಗಿರಿಗೆ ಅಂಕುಶ ಹಾಕುವಂತೆ ಪೊಲೀಸರನ್ನು ನಿಯೋಜಿಸಬೇಕೆಂದು ಒತ್ತಾಯಪಡಿಸುತ್ತಿದ್ದರು.