ಮಡಿಕೇರಿ, ಮಾ. 15: ನಗರದ ಸ್ಟೋನ್‍ಹಿಲ್ ಬಳಿ ತಾ. 12 ರಂದು ರಾತ್ರಿ ಕಾರ್ಮಿಕ ಶರತ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಘಾಸಿಗೊಳಿಸಿ ಕೊಲೆಯತ್ನ ಮಾಡಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳಾದ ಸುಜಿತ್, ಕೀರ್ತನ್, ಹರ್ಷ ಹಾಗೂ ಪುನೀತ್ ದುಷ್ಕøತ್ಯ ಎಸಗಿದ್ದು, ಪೊಲೀಸ್ ಕಾಯ್ದೆ 307, ರೆ/ವಿ 34ರ ಅನ್ವಯ ಮೊಕದ್ದಮೆ ದಾಖಲಾಗಿದೆ.

ತಾ. 12 ರಂದು ರಾತ್ರಿ 11.30ರ ಸುಮಾರಿಗೆ ವಿ.ಕೆ. ಉಮೇಶ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರಾತ್ರಿ 8.30ರ ಸುಮಾರಿಗೆ ಆರೋಪಿಗಳು ಶರತ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಗಾಯಾಳು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಗಮನಿಸಿ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಅಲ್ಲದೆ ಗಾಯಾಳುವನ್ನು ಆ್ಯಂಬುಲೆನ್ಸ್‍ನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.

ಆ ಮೇರೆಗೆ ತನಿಖೆ ಕೈಗೊಂಡು ಆರೋಪಿಗಳಾದ ಪುಟಾಣಿನಗರದ ರವಿ ಎಂಬವರ ಪುತ್ರ ಬಿ.ಆರ್. ಕೀರ್ತನ್ (19), ದೇಚೂರು ನಿವಾಸಿ ದಿ. ಸಂಜೀವ್ ಪುತ್ರ ಬಿ.ಎಸ್. ಪುನೀತ್ (25) ಎಂಬಿಬ್ಬರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳಾದ ಸುಜಿತ್ (23) ಹಾಗೂ ಕೆ. ಹರ್ಷ (22) ಕೆಆರ್‍ಎಸ್ ಬಳಿ ಬಂಧಿಸಲ್ಪಟ್ಟಿದ್ದಾರೆ. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿ ಷಣ್ಮುಖ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾಗಿ ಗೊತ್ತಾಗಿದೆ.