ಮಡಿಕೇರಿ, ಮಾ. 15 : ಹಾಕಿ ಕೂರ್ಗ್ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ 12 ತಂಡಗಳ ಹಾಕಿ ಕೂರ್ಗ್ ಚಾಂಪಿಯನ್ಸ್ ಟ್ರೋಫಿ ಹಾಗೂ ಇತರ ತಂಡಗಳ ಹಾಕಿ ಚಾಂಪಿಯನ್‍ಶಿಪ್ ಪಂದ್ಯಾವಳಿ ಯನ್ನು ಕಾಕೋಟುಪರಂಬುವಿನಲ್ಲಿ ಆಯೋಜಿಸಲಾಗಿದೆ ಎಂದು ಹಾಕಿ ಕೂರ್ಗ್ ಕಾರ್ಯಾಧ್ಯಕ್ಷ ಹಾಗೂ ಟೂರ್ನಮೆಂಟ್ ಕಮಿಟಿ ಅಧ್ಯಕ್ಷ ಮೊಳ್ಳೇರ ಪಿ.ಸುಬ್ಬಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಎರಡೂ ಪಂದ್ಯಾವಳಿಗಳು ಏ.14ರಿಂದ ಮೇ 12ರವರೆಗೆ ಕಾಕೋಟುಪರಂಬು ಮೈದಾನದಲ್ಲಿ ನಡೆಯಲಿದೆ ಎಂದರು. ಹಾಕಿ ಕೂರ್ಗ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಕೊಡವ ಹಾಕಿ ಹಬ್ಬದಲ್ಲಿ ಫೈನಲ್ ತಲಪಿದ ಚೇಂದಂಡ, ಪಳಂಗಂಡ, ಕೂತಂಡ, ಪರದಂಡ, ಮಂಡೇಪಂಡ, ನೆಲ್ಲಮಕ್ಕಡ, ಚೆಪ್ಪುಡಿರ, ಕಲಿಯಂಡ, ಕರಿನೆರವಂಡ, ಕುಲ್ಲೇಟಿರ ಸೇರಿದಂತೆ 12 ತಂಡಗಳು ಪಾಲ್ಗೊಳ್ಳಲಿದ್ದು, ಇನ್ನು ಒಂದು ತಂಡದ ಆಯ್ಕೆ ನಡೆಯಬೇಕಾಗಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಸುರಿದ ಅತಿವೃಷ್ಟಿ ಹಾಗೂ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಹಾಕಿ ಹಬ್ಬ ಸೇರಿದಂತೆ ಹಲವು ಹಾಕಿ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ. ಆದರೆ ಆಟಗಾರರಲ್ಲಿ ನಿರಂತರತೆ ಕಾಪಾಡುವ ದಿಸೆಯಲ್ಲಿ ಹಾಕಿ ಕೂರ್ಗ್ ಸಂಸ್ಥೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಹಾಗೂ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಚಾಂಪಿಯನ್‍ಶಿಪ್ ಪಂದ್ಯಾವಳಿಗೆ ಈಗಾಗಲೇ 65 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಮಾ.31ರ ಒಳಗೆ ಹೆಸರು ನೋಂದಾಯಿಸುವ 100 ತಂಡಗಳಿಗೆ ಈ ಬಾರಿಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಅನುಮತಿ ಕಡ್ಡಾಯ

ಜಿಲ್ಲೆಯಲ್ಲಿ ಹಾಕಿ ಹಬ್ಬ ಮಾಸ್ಟರ್ಸ್ ಟೂರ್ನಮೆಂಟ್, ಕ್ಲಬ್ ಟೂರ್ನಮೆಂಟ್ ಸೇರಿದಂತೆ ಯಾವದೇ ರೀತಿಯ ಹಾಕಿ ಪಂದ್ಯಾವಳಿ ನಡೆಸಬೇಕಾದರೆ ಹಾಕಿ ಕೂರ್ಗ್ ಸಂಸ್ಥೆಯಿಂದ ಅನುಮತಿ ಪಡೆಯುವದು ಕಡ್ಡಾಯವಾಗಿದ್ದು, ಇದನ್ನು ಹಾಕಿ ಕರ್ನಾಟಕ ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ ಹಾಕಿ ಅಕಾಡೆಮಿಯ ಕೆಲವರು ಇತ್ತೀಚೆಗೆ ಪತ್ರಿಕಾ ಹೇಳಿಕೆಯೊಂದರಲ್ಲಿ ಹಾಕಿ ಕೂರ್ಗ್ ಸಂಸ್ಥೆಗೆ ಕುಟುಂಬ ತಂಡಗಳ ಹಾಕಿ ನಡೆಸಲು ಅವಕಾಶವಿಲ್ಲ ಎಂದು ಹೇಳಿದ್ದು, ಪಂದ್ಯಾವಳಿಯನ್ನು ತಡೆಯುವ ಯಾವದೇ ಅಧಿಕಾರ ಅಕಾಡೆಮಿಗೆ ಇಲ್ಲ ಎಂದು ಸ್ಪಷ್ಪಪಡಿಸಿದರು.

ಕೊಡವ ಕುಟುಂಬಗಳ ತಂಡ ಮಾತ್ರವಲ್ಲದೆ ಯಾವದೇ ಜನಾಂಗದವರು ಹಾಕಿ ಪಂದ್ಯಾವಳಿ ಆಯೋಜಿಸಲು ಮುಂದಾದರೂ ಅದಕ್ಕೆ ಹಾಕಿ ಕೂರ್ಗ್ ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ, ಪಳಂಗಂಡ ಲವಕುಮಾರ್, ನಿರ್ದೇಶಕ ಕಲ್ಮಾಡಂಡ ನವೀನ್ ಬೆಳ್ಯಪ್ಪ ಗೋಷ್ಠಿಯಲ್ಲಿ ಹಾಜರಿದ್ದರು.