ಮಡಿಕೇರಿ, ಮಾ.15 : ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗುಮ್ಮನಕೊಲ್ಲಿ ನಿವಾಸಿ ಬಿ.ಆರ್. ರಾಜು ಎಂಬವರು ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದು, ಅಮಾನವೀಯತೆ ಮೆರೆದಿದ್ದಾರೆ ಎಂದು ದ.ಸಂ.ಸ. ಜಿಲ್ಲಾ ಸಂಘÀಟನಾ ಸಂಚಾಲಕ ಕೆ.ಬಿ.ರಾಜು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಮ್ಮನಕೊಲ್ಲಿಯಲ್ಲಿ 10 ಗುಂಟೆ ಸರ್ಕಾರಿ ಜಮೀನಿನಲ್ಲಿ ಕಡು ಬಡತನದ ರಾಜು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಜಾಗವನ್ನು ಸಕ್ರಮಗೊಳಿಸಿಕೊಳ್ಳಲು ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಕಂದಾಯ ಅಧಿಕಾರಿಗಳು ಗುಡಿಸಲನ್ನು ತೆರವುಗೊಳಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.
ತಕ್ಷಣ ರಾಜು ಅವರು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ನಿವೇಶನವನ್ನು ಮಂಜೂರು ಮಾಡಿಕೊಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಕೆ.ಬಿ. ರಾಜು ಎಚ್ಚರಿಕೆ ನೀಡಿದರು.
ಅಬ್ಬೂರುಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿರುವ 30 ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ಮತ್ತು ಮನೆ ನಿರ್ಮಿಸಿಕೊಡಬೇಕು, ಅರೆಹೊಸೂರು ಗ್ರಾಮದ ನಿವಾಸಿಗಳಿಗೆ ಮನೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಕೆ.ಬಿ. ರಾಜು ಇದೇ ಸಂದರ್ಭ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಆರ್. ಮಂಜುಳಾ, ಬಿ.ಆರ್. ರಾಜು, ಎಂ.ಬಿ. ಲತಾ, ವೀಣಾ, ಮಣಿ ಉಪಸ್ಥಿತರಿದ್ದರು.